ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಬಾರಾ ಹಿಲ್ಸ್ ಬಳಿ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದನಕೇರಾ ಗ್ರಾಮದ ನಿವಾಸಿ ಪ್ರಮೋದ್(24) ಕೊಲೆಯಾದ ಯುವಕ.
ಟ್ರಾನ್ಸ್‌ಪೋರ್ಟ್ ವ್ಯವಹಾರ ಮಾಡಿಕೊಂಡಿದ್ದ ಪ್ರಮೋದ್, ಕಲಬುರಗಿ ನಗರದ ಪೂಜಾ ಕಾಲನಿಯಲ್ಲಿ ವಾಸವಾಗಿದ್ದ. ಮೇ 21ರಂದು ರಾತ್ರಿ ಪ್ರಮೋದ್ ತನ್ನ ಮಾವ ಅವಿನಾಶ್ ರೊಂದಿಗೆ ಮನೆಗೆ ಬರುತ್ತಿರುವ ವೇಳೆ ಕೊಲೆ ನಡೆದಿದೆ.
ತಡರಾತ್ರಿ ಪ್ರಮೋದ್ ಮಾವನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ಜೀಪ್ ಸವಾರರೊಂದಿಗೆ ಜಗಳವೇರ್ಪಟ್ಟಿದೆ. ಮಹಿಂದ್ರಾ ಥಾರ್ ಜೀಪ್ ನಲ್ಲಿ ಹೋಗುತ್ತಿದ್ದ ಯುವಕರು ಎರಡು ಕಡೆಗೆ ಇಂಡಿಕೇಟರ್ ಹಾಕಿ ಗೊಂದಲ ಉಂಟು ಮಾಡಿದ್ದರು. ಸುಮಾರು ಒಂದೂವರೆ ಕಿ.ಮೀ ವರೆಗೆ ಇದೆ ರೀತಿ ಸತಾಯಿಸುತ್ತಿದ್ದರು.
ಇದರಿಂದ ತೊಂದರೆ ಅನುಭವಿಸುತ್ತಿದ್ದ ಬೈಕ್ ಸವಾರ ಪ್ರಮೋದ್, ಇಂಡಿಕೇಟೆರ್ ಸರಿಯಾಗಿ ಹಾಕುವಂತೆ ಹೇಳಿದ್ದಾನೆ. ಈ ವೇಳೆ ಜೀಪ್ ನಿಂದ ಇಳಿದು ಬಂದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಎಮ್‌ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.