ಜೈಪುರ: ಕ್ಷುಲ್ಲಕ ಕಾರಣಕ್ಕೆ ನೆರೆಮನೆಯ ಯುವಕನ ರುಂಡವನ್ನೇ ಕಡಿದು ಹತ್ಯೆ ಮಾಡಿರುವ ಭಯಾನಕ ಕೊಲೆ ಪ್ರಕರಣ ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಕಿಶೋರ್ ಸಿಂಗ್(23) ಎಂಬ ಯುವಕ ಮೃತಪಟ್ಟ ದುರ್ದೈವಿ. ಸಂಕ್ಲಾರಾಮ್ ಭೀಲ್ (50) ಹತ್ಯೆ ಮಾಡಿರುವ ಆರೋಪಿ. ಈತನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿ ಹಾಗೂ ಹತ್ಯೆಗೊಳಗಾದ ದುರ್ದೈವಿ ಇಬ್ಬರೂ ನೆರೆಹೊರೆಯವರಾಗಿದ್ದಾರೆ. ಕುಡಿದ ಮತ್ತಿನಲ್ಲಿ ಕಿಶೋರ್ ಸಿಂಗ್, ಸಂಕ್ಲಾರಾಮ್ ಭೀಲ್ ಮೊಮ್ಮಗನನ್ನು ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ವಿಚಾರ ತಿಳಿದು ಸಿಟ್ಟಿಗೆದ್ದ ಆರೋಪಿಯು, ಕಿಶೋರ್ ಸಿಂಗ್ ನ ತಲೆಯನ್ನು ಕೊಡಲಿಯಿಂದ ಕಡಿದು ಕೊಲೆ ನಡೆದ ಜಾಗದಿಂದ 150 ಮೀಟರ್ ಮುಂದಕ್ಕೆ ಎಸೆದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಇದೀಗ ಕಿಶೋರ್ ಸಿಂಗ್ ಕುಟುಂಬಸ್ಥರು ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.