ನಮಗೀಗ ಮಗು ಬೇಕು ಪತಿಯನ್ನು ಪರೋಲ್ ಮೇಲೆ ಮನೆಗೆ ಕಳುಹಿಸಿ ಕೊಡಿ : ಜೈಲು ಅಧಿಕಾರಿಗೆ ಪತ್ರ ಬರೆದ ಕೈದಿಯ ಪತ್ನಿ
Thursday, May 18, 2023
ಮಧ್ಯಪ್ರದೇಶ: ಮದುವೆಯಾದ ವೇಳೆ ಜೈಲು ಸೇರಿದ್ದ ಪತಿಯನ್ನು ಬಿಡುಗಡೆ ಮಾಡುವಂತೆ ಕೋರಿ ಮಹಿಳೆಯೊಬ್ಬಳು ತನ್ನ ಪತಿಯ ಪರವಾಗಿ ಜೈಲು ಅಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ. ವಿವಾಹದ ಸಂದರ್ಭದಲ್ಲಿ ಪತಿ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಇದರಿಂದ ತನಗೆ ಗರ್ಭ ಧರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ತನ್ನ ಪತಿಯನ್ನು ಪೆರೋಲ್ ಮೇಲೆ ಕಳುಹಿಸಿಕೊಡಬೇಕು ಎಂದು ಕೇಳಿಕೊಂಡಿದ್ದಾಳೆ.
ಶಿವಪುರಿ ಮೂಲದ ದಾರಾ ಸಿಂಗ್ ಜಾದವ್ ಎಂಬಾತ ಕಳೆದ ಏಳು ವರ್ಷಗಳಿಂದ ಗ್ವಾಲಿಯರ್ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಈತನ ಮದುವೆಯಾಗಿದ್ದ ವೇಳೆಯೇ ಕೊಲೆ ಪ್ರಕರಣವೊಂದರಲ್ಲಿ ಅಪರಾಧಿಯಾಗಿ ಜೈಲು ಸೇರಿದ್ದ. ಪರಿಣಾಮ ಆತನ ಪತ್ನಿ ಒಬ್ಬಂಟಿಯಾಗಿ ಜೀವನ ದೂಡಬೇಕಾದ ಸ್ಥಿತಿ ಬಂದೊದಗಿತ್ತು. ಇದೀಗ ಪತ್ನಿ, ಮದುವೆಯಾಗಿ ಏಳು ವರ್ಷಗಳು ಕಳೆದರೂ ತನಗೆ ಮಕ್ಕಳಾಗಿಲ್ಲ. ತಾನೀಗ ಗರ್ಭ ಧರಿಸಬೇಕು. ಆದ್ದರಿಂದ ನನ್ನ ಪತಿಯನ್ನು ಪೆರೋಲ್ ಮೂಲಕ ಜೈಲಿನಿಂದ ಕಳುಹಿಸಿಕೊಡಿ ಎಂದು ಜೈಲುಅಧಿಕಾರಿಗೆ ಪತ್ರ ಬರೆದಿದ್ದಾಳೆ.
ಪುತ್ರನ ಬಂಧನದಿಂದ ತಮಗೆ ಮದುವೆಯ ಸಂತಸವನ್ನು ಸಂಭ್ರಮಿಸಲು ಸಾಧ್ಯವಾಗಿಲ್ಲ. ಇದೀಗ ನಮಗೆ ವಯಸ್ಸಾಗಿದೆ. ತನ್ನ ಪತ್ನಿಯೂ ಅನಾರೋಗ್ಯ ಪೀಡಿತಳಾಗಿದ್ದು, ಮೊಮ್ಮಗ ಬೇಕೆಂದು ಬಯಸುತ್ತಿದ್ದಾಳೆ. ಆದ್ದರಿಂದ ಪುತ್ರನನ್ನು ಕೆಲ ದಿನಗಳ ಕಾಲ ಜೈಲಿನಿಂದು ಕಳುಹಿಸಿಕೊಡುವಂತೆ ಕೈದಿ ದಾರಾ ಸಿಂಗ್ ನ ತಂದೆ ಕರೀಂ ಸಿಂಗ್ ಜಾದವ್ ಮನವಿಮಾಡಿಕೊಂಡಿದ್ದಾರೆ.
ಕೈದಿಯ ಬಿಡುಗಡೆಗೆ ಸಂಬಂಧಿಸಿದ ಮನವಿ ಪತ್ರವನ್ನು ಸದ್ಯ ಶಿವಪುರಿ ಎಸ್‌ಪಿಯವರ ಪರಿಶೀಲನೆಗೆ ಕಳುಹಿಸಿಕೊಡಲಾಗಿದೆ ಎಂದು ವರದಿಯಾಗಿದೆ. ಈ ನಡುವೆ ಗ್ವಾಲಿಯರ್ ಸೆಂಟ್ರಲ್ ಜೈಲ್ ಸೂಪರಿಂಟೆಂಡೆಂಟ್ ವಿದಿತ್ ಸಿರ್ವಯ್ಯ ಪ್ರತಿಕ್ರಿಯಿಸಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಶಿಕ್ಷೆ ಎರಡು ವರ್ಷ ಪೂರ್ಣಗೊಂಡ ಬಳಿಕ ನಡವಳಿಕೆಯು ಆಧಾರದ ಮೇಲೆ ಪೆರೋಲ್ ಪಡೆಯಲು ಅರ್ಹರಾಗಿರುತ್ತಾರೆ. ಪೆರೋಲ್ ನೀಡುವುದು ಅಥವಾ ನೀಡದಿರುವ ಬಗ್ಗೆ ಜಿಲ್ಲಾಧಿಕಾರಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.