ಆ್ಯಂಬುಲೆನ್ಸ್ ವೆಚ್ಚ ಭರಿಸಲಾಗದೆ ಐದು ತಿಂಗಳ ಶಿಶುವಿನ ಮೃತದೇಹವನ್ನು ಬಸ್ ನಲ್ಲಿಯೇ 200 ಕಿ.ಮೀ. ಸಾಗಿಸಿದ ತಂದೆ


ಕೋಲ್ಕತ್ತಾ: ಮೃತಪಟ್ಟ ತನ್ನ ಐದು ತಿಂಗಳ ಹಸುಗೂಸಿನ ಮೃತದೇಹವನ್ನು ಚೀಲದಲ್ಲಿಟ್ಟುಕೊಂಡು ಸಾರ್ವಜನಿಕ ಬಸ್‌ನಲ್ಲಿ 200 ಕಿಲೋಮೀಟರ್ ನತದೃಷ್ಟ ತಂದೆಯೋರ್ವನು ಪ್ರಯಾಣಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ನಡೆದಿದೆ. ಈ ವ್ಯಕ್ತಿ ಭಾನುವಾರ ಮಾತನಾಡಿ 'ತನ್ನಲ್ಲಿ ಸಿಲಿಗುರಿಯಿಂದ ಕಲಿಯಗಂಜ್‌ನಲ್ಲಿರುವ ಮನೆಗೆ ಮಗುವಿನ ಮೃತದೇಹವನ್ನು ಸಾಗಿಸಲು ಆಂಬ್ಯುಲೆನ್ಸ್ ವೆಚ್ಚ ಭರಿಸಲು 8,000 ರೂ. ಇರಲಿದಲ್ಲದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದಿದ್ದಾನೆ. 

“ಅನಾರೋಗ್ಯ ಪೀಡಿತ ಮಗುವಿಗೆ ಆರು ದಿನಗಳ ಕಾಲ ಸಿಲಿಗುರಿಯ ಉತ್ತರ ಬಂಗಾಳ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಐದು ತಿಂಗಳ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಚಿಕಿತ್ಸೆಗೆಂದು ನಾನು 16,000 ರೂ. ಮಾಡಿದ್ದೆ. ಆದರೆ ಮಗುವಿನ ಮೃತದೇಹವನ್ನು ಕಲಿಯಗಂಜ್‌ಗೆ ಸಾಗಿಸಲು ಅಲ್ಲಿನ ಆಂಬ್ಯುಲೆನ್ಸ್ ಡ್ರೈವರ್ ಬೇಡಿಕೆ ಇಟ್ಟಿದ್ದ 8,000 ರೂ. ಪಾವತಿಸಲು ನನ್ನಲ್ಲಿ ಹಣವಿರಲಿಲ್ಲ” ಎಂದು ತಂದೆ ದೇವ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದೇವ್‌ಶರ್ಮಾ ಮೃತದೇಹವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯಿಂದ ಸುಮಾರು 200 ಕಿಮೀ ದೂರದಲ್ಲಿರುವ ಉತ್ತರ ದಿನಾಜ್‌ಪುರ ಜಿಲ್ಲೆಯ ಕಲಿಯಗಂಜ್‌ಗೆ ಪ್ರಯಾಣಿಸಿದ್ದಾರೆ. ಆದರೆ ಬಸ್ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರಿಗೆ ತಿಳಿದರೆ ತನ್ನನ್ನು ಬಸ್‌ನಿಂದ ಹೊರಹಾಕುವ ಭಯದಿಂದ ಯಾರಿಗೂ ತಿಳಿಸದೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಘಟನೆಯ ಬಳಿಕ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿಯ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್ ಸರ್ಕಾರದ 'ಸ್ವಾಸ್ಥ್ಯ ಸತಿ' ಆರೋಗ್ಯ ವಿಮಾ ಯೋಜನೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ್ದಾರೆ. ಆದರೆ ಮಗುವಿನ ದುರದೃಷ್ಟಕರ ಸಾವಿನ ಬಗ್ಗೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಟಿಎಂಸಿ ಆರೋಪಿಸಿದೆ.