12 ಸಾವಿರ ಕೋಟಿ ರೂ. ಮೌಲ್ಯದ 2500 ಕೆಜಿ ಮಾದಕ ವಸ್ತು ವಶ: ಪಾಕಿಸ್ತಾನಿ ಪ್ರಜೆ ಅರೆಸ್ಟ್
Sunday, May 14, 2023
ಹೊಸದಿಲ್ಲಿ: ಕೇರಳ ರಾಜ್ಯದ ಕರಾವಳಿ ತೀರದಲ್ಲಿದ್ದ ಹಡಗೊಂದರಿಂದ ಬರೋಬ್ಬರಿ 12 ಸಾವಿರ ಕೋಟಿ ರೂ. ಮೌಲ್ಯದ 2500 ಕೆಜಿ ಮೆಟಾಫೆಟಮೈನ್ ಅನ್ನು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್ ಸಿಬಿ) ವಶಪಡಿಸಿಕೊಂಡಿದೆ.
ಈ ಮೂಲಕ ಮಾದಕ ವಸ್ತು ವಿರುದ್ಧದ ಸಮರದಲ್ಲಿ ದೇಶ ಭರ್ಜರಿ ಯಶಸ್ಸು ಸಾಧಿಸಿದೆ. ಇದು ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತು ವಶಪಡಿಸಿಕೊಂಡ ಪ್ರಕರಣವಾಗಿದೆ ಎಂದು ಎನ್‌ಸಿಬಿ ಪ್ರಕಟಿಸಿದೆ.
ಅಫ್ಘಾನಿಸ್ತಾನ ಮೂಲದ ಮಾದಕ ವಸ್ತು ಕಳ್ಳಸಾಗಾಟವನ್ನು ತಡೆಯುವ ಉದ್ದೇಶದಿಂದ ಅಪರೇಷನ್ ಸಮುದ್ರಗುಪ್ತ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಕಳೆದ ಒಂದುವರೆ ವರ್ಷಗಳ ಅವಧಿಯಲ್ಲಿ ದಕ್ಷಿಣ ಸಮುದ್ರ ಮಾರ್ಗದಲ್ಲಿ ಎನ್‌ಸಿಪಿ ಡ್ರಗ್ಸ್ ವಶಪಡಿಸಿಕೊಂಡ ಮೂರನೇ ಪ್ರಮುಖ ಪ್ರಕರಣ ಇದಾಗಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 3200 ಕೆ.ಜಿ. ಮೆಟಾಫೆಟಮೈನ್, 500 ಕೆಜಿ ಹೆರಾಯಿನ್ ಮತು 525 ಕೆಜಿ ಹಶೀಶ್ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಸಿಬಿ ಹೇಳಿದೆ.