ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಎಸ್ ಡಿಪಿಐ ಪಕ್ಷದ ಅಭ್ಯರ್ಥಿ ಶಾಫಿ ಬೆಳ್ಳಾರೆ ಜೈಲಿನಲ್ಲಿದ್ದುಕೊಂಡೇ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಎಪಿಎಂಸಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಕಾರ್ಯಕರ್ತರು ಮೆರವಣಿಗೆ ಮೂಲಕ ತಾಲೂಕು ಆಡಳಿತ ಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಮೆರವಣಿಗೆಯಲ್ಲಿ ಕಾರ್ಯಕರ್ತರು ಶಾಫಿ ಬೆಳ್ಳಾರೆ ಪರ ಘೋಷಣೆ ಕೂಗಿದರು. ಬಳಿಕ ಶಾಫಿ ಬೆಳ್ಳಾರೆಯವರು ತಮ್ಮ ಪಕ್ಷದ ಏಜೆಂಟ್ ಮೂಲಕ ನಾಮಪತ್ರ ಸಲ್ಲಿಸಿದರು.
ಬೆಳ್ಳಾರೆಯಲ್ಲಿ 2022ರ ಜುಲೈ 26ರಂದು ಬಿಜೆಪಿ ಯುವ ಮೋರ್ಚ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಮಾಡಲಾಗಿತ್ತು. ತಮ್ಮ ಕೋಳಿ ಅಂಗಡಿಯಲ್ಲಿದ್ದ ವೇಳೆ ಅಂಗಡಿಗೆ ನುಗ್ಗಿ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.ರಾಜ್ಯ ಸರಕಾರ ಈ ಪ್ರಕರಣವನ್ನು ಎನ್ಐಎಗೆ ಒಪ್ಪಿಸಿತ್ತು. ಈ ಹಿನ್ನೆಲೆಯಲ್ಲಿ ಎನ್ಐಎ ಪ್ರಕರಣದ ತನಿಖೆ ನಡೆಸಿ ಹಲವರನ್ನು ಬಂಧಿಸಿತ್ತು. ಶಾಫಿ ಬೆಳ್ಳಾರೆ ಕೂಡಾ ಈ ರೂವಾರಿ ಎಂದು ಯುಎಪಿಎ ಕಾಯ್ದೆಯಡಿ ಎನ್ಐಎ ಬಂಧಿಸಿತ್ತು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಸ್ ಡಿಪಿಐ ಪಕ್ಷ ಶಾಫಿ ಬೆಳ್ಳಾರೆಯನ್ನು ಚುನಾವಣಾ ಅಖಾಡಕ್ಕೆ ಇಳಿಸಲಾಗುತ್ತದೆ ಎಂದು ಘೋಷಿಸಿತ್ತು. ಅದರಂತೆ ಶಾಫಿ ಬೆಳ್ಳಾರೆ ಜೈಲಿನಿಂದಲೇ ಚುನಾವಣಾ ಸ್ಪರ್ಧಿಯಾಗಿ ಕಣಕ್ಕಿಳಿದಿದ್ದರು. ಅದರಂತೆ ಇಂದು ಅವರು ಜೈಲಿನೊಳಗಿದ್ದುಕೊಂಡೇ ಪಕ್ಷದ ಏಜೆಂಟ್ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ.