ಸೊಸೆಯ ಸೆಕ್ಸ್ ಚಾಟಿಂಗ್ ಪತ್ತೆ : ಮಲಗಿದ್ದಲ್ಲೇ ಹತ್ಯೆಯಾದ ಅತ್ತೆ - ಮಾವ
Friday, April 14, 2023
ನವದೆಹಲಿ: ವಿವಾಹೇತರ ಸಂಬಂಧವನ್ನು ಹೊಂದಿ ಅದನ್ನು ಮುಚ್ಚಿಡಲು ಏನೇನೋ ಮಾಡುವ ಪ್ರಕರಣಗಳನ್ನು ನಾವು ಸಮಾಜದಲ್ಲಿ ಅಲ್ಲಿಇಲ್ಲಿ ನೋಡುತ್ತಲೇ ಇರುತ್ತೇವೆ. ಕೆಲವೊಂದು ಪ್ರಕರಣಗಳಲ್ಲಿ ತಮ್ಮ ಸಂಬಂಧವನ್ನು ಮುಚ್ಚಿಡುವ ಉದ್ದೇಶದಿಂದ ಘೋರ ಕೃತ್ಯವನ್ನೇ ಕೆಲವರು ಎಸಗುತ್ತಾರೆ. ಅಂತಹ ಒಂದು ಘಟನೆ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಸೊಸೆ ಮತ್ತು ಆಕೆಯ ಬಾಯ್‌ಫ್ರೆಂಡ್ ನಡುವಿನ ಸೆಕ್ಸ್ ಚಾಟ್ಸ್ ಅನ್ನು ಪತ್ತೆಹಚ್ಚಿರುವ ಹಿರಿಯ ದಂಪತಿಯ ಕೆಂಡಾಮಂಡಲವಾಗಿ ಅದನ್ನು ಪುತ್ರನಲ್ಲಿ ಹೇಳುವುದಾಗಿ ತಿಳಿಸಿದ್ದಾರೆ. ಅದೇ ಕಾರಣಕ್ಕೆ ಸೊಸೆ ತನ್ನ ಪ್ರಿಯಕರನಲ್ಲಿ ಮಲಗಿದ್ದಲ್ಲಿಯೇ ಅತ್ತೆ - ಮಾವನನ್ನು ಭೀಕರವಾಗಿ ಹತ್ಯೆ ಮಾಡಿಸಿದ್ದಾಳೆ.
ಈ ಭಯಾನಕ ಘಟನೆಯಲ್ಲಿ ಹಿರಿಯ ದಂಪತಿಯಾದ ರಾಧ್ಯೆ ಶ್ಯಾಮ್ ವರ್ಮ ಹಾತ ಅವರ ಪತ್ನಿ ವೀಣಾ ಭೀಕರ ಹತ್ಯೆಯಾಗಿದ್ದಾರೆ. ಸೊಸೆ ಮೋನಿಕಾ (30) ಹತ್ಯೆಯ ರೂವಾರಿ. ಪ್ರಿಯಕರ ಆಶಿಶ್ ಕೊಲೆ ಆರೋಪಿ.
ಸೊಸೆ ಮೋನಿಕಾ ತನ್ನ ಬಾಯ್‌ಫ್ರೆಂಡ್ ನೊಂದಿಗೆ ವಾಟ್ಸ್ ಆ್ಯಪ್ ನಲ್ಲಿ ಸೆಕ್ಸ್ ಚಾಟ್ಸ್ ಮಾಡುತ್ತಿದ್ದಳು. ಇವರು ಅಶ್ಲೀಲ ಸಂಭಾಷಣೆ ನಡೆಸಿರುವುದು ಈ ಹಿರಿಯ ದಂಪತಿಗೆ ಅದು ಹೇಗೋ ತಿಳಿದು ಬಂದಿದೆ. ಈ ವಿಚಾರ ಗೊತ್ತಾದ ಬೆನ್ನಲ್ಲೇ ಆಕೆಯ ಮೊಬೈಲ್ ಅನ್ನು ಅತ್ತೆ-ಮಾವ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಸೊಸೆ ತಮ್ಮ ಪುತ್ರ ರವಿಗೆ ವಂಚನೆ ಮಾಡುತ್ತಿದ್ದಾಳೆಂದು ಮೊಬೈಲ್ ಕಿತ್ತುಕೊಂಡ ದ್ವೇಷಕ್ಕೆ ಪ್ರತಿಯಾಗಿ ಮೋನಿಕಾ ತನ್ನ ಅತ್ತೆ- ಮಾವನನ್ನೇ ಕೊಲೆ ಮಾಡಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯನ್ನು ಬುಧವಾರ ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಹಲವು ಭಯಾನಕ ಸಂಗತಿಗಳನ್ನು ಮೋನಿಕಾ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ. ಅದಕ್ಕೂ ಮುನ್ನ ಆಸ್ತಿ ವಿವಾದದಿಂದ ಈ ಕೊಲೆ ನಡೆಸಿರಬಹುದು ಎಂಬ ಶಂಕೆಯಿತ್ತು.
ಮೋನಿಕಾ ದೆಹಲಿ ವಿವಿಯಿಂದ ಪದವಿ ಪಡೆದಿದ್ದಾಳೆ. ಮದುವೆಗೂ ಮುನ್ನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಮದುವೆಯಾದ ಬಳಿಕ ಕೆಲಸ ತೊರೆದು ಪತಿಯೊಂದಿಗೆ ವಾಸಿಸುತ್ತಿದ್ದಳು. ಈ ದಂಪತಿಗೆ ಮಗುವೊಂದೂ ಇದೆ. ಲಾಕ್‌ಡೌನ್ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಮೋನಿಕಾ ಸಕ್ರಿಯಳಾಗಿದ್ದಳು. 2020ರ ಆಗಸ್ಟ್ ನಲ್ಲಿ ಮೋನಿಕಾಗೆ ಸಾಮಾಜಿಕ ಜಾಲತಾಣದಲ್ಲಿ ಆಶಿಶ್ ನ ಪರಿಚಯವಾಗಿದೆ. ಆರಂಭದಲ್ಲಿ ಸಹಜವಾಗಿದ್ದ ಚಾಟ್‌ಗಳು, ಇಬ್ಬರ ಸಂಬಂಧ ಮುಂದುವರಿದಂತೆ ಲೈಂಗಿಕ ಚಾಟ್‌ಗಳಾಗಿ ಮಾರ್ಪಟ್ಟಿದೆ.
ಅಲ್ಲದೆ ಆಶಿಶ್ ಹಾಗೂ ಮೋನಿಕಾ ಹಲವಾರು ಬಾರಿ ಹೋಟೆಲ್‌ಗಳಲ್ಲಿ ಭೇಟಿಯಾಗಿದ್ದರು. ಮೋನಿಕಾಗೆ ವಿವಾಹವಾಗಿ ಮಗುವೂ ಇದೆ ಎಂದು ತಿಳಿದಿದ್ದ ಆಶಿಶ್ ಮನೆಯವರು ಈ ಸಂಬಂಧವನ್ನು ವಿರೋಧಿಸಿದ್ದರು. ಅಲ್ಲದೆ ಪತ್ನಿ ಮೋನಿಕಾ ಮತ್ತು ಆಶಿಶ್ ನಡುವಿನ ಸೆಕ್ಸ್ ಚಾಟ್ಸ್ ಅತ್ತೆ - ಮಾವ ನೋಡಿದ ಬಳಿಕ ಸಮಸ್ಯೆ ಉಲ್ಬಣಿಸಿದೆ. ಇದಾದ ಬಳಿಕ ರವಿಯ ಪಾಲಕರು ಮೋನಿಕಾ ಮೇಲೆ ನಿಗಾ ಇಡಲು ಪ್ರಾರಂಭಿಸಿದರು. ಗೋಕುಲಪುರಿಯಲ್ಲಿರುವ ತಮ್ಮ ಮನೆ ಮಾರಿ ದ್ವಾರಕಾಗೆ ಹೋಗಿ ನೆಲೆಸುವ ಅತ್ತೆ-ಮಾವನ ನಿರ್ಧಾರವೇ ಕೊಲೆ ಸಂಚನ್ನು ಕಾರ್ಯಗತಗೊಳಿಸಲು ಪ್ರೇರೇಪಿಸಿತು ಎಂದು ಮೋನಿಕಾ ವಿಚಾರಣೆ ಸಮಯದಲ್ಲಿ ಬಾಯ್ದಿಟ್ಟಿದ್ದಾಳೆ.
ಮೋನಿಕಾ ತನ್ನ ಪ್ರಿಯಕರ ಮತ್ತು ಆತನ ಸ್ನೇಹಿತರ ನೆರವಿನಿಂದ ಹಿರಿಯ ದಂಪತಿಯ ಕೊಲೆ ಮಾಡಿಸಿದ್ದಾಳೆ. ನಿವೃತ್ತ ಉಪ- ಪ್ರಾಂಶುಪಾಲ ರಾಧೇಯ್ ಶ್ಯಾಮ್ ವರ್ಮ ಮತ್ತು ಅವರ ಪತ್ನಿ ವೀಣಾ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಮೋನಿಕಾ ಹಾಗೂ ಆಕೆಯ ಪತಿ ಮತ್ತು ಮಗ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. ರವಿವಾರ ಸಂಜೆ 7 ಗಂಟೆ ಸುಮಾರಿಗೆ ಮೋನಿಕಾ ತನ್ನ ಬಾಯ್ ಫ್ರೆಂಡ್ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಮನೆಯ ಟೆರೇಸ್ ಮೇಲೆ ಬಚ್ಚಿಟ್ಟು ರಾತ್ರಿ ವೃದ್ಧ ದಂಪತಿಯ ಮಲಗುವ ಕೋಣೆಗೆ ನುಗ್ಗಿಸಿ, ಕತ್ತು ಸೀಳಿ ಹತ್ಯೆ ಮಾಡಿಸಿದ್ದಾಳೆ. ಇದೀಗ ಸಂಚು ರೂಪಿಸಿ ಕೊಲೆಗೈದ ಸೊಸೆಯನ್ನು ಆಕೆಯ ಬಾಯ್ ಫ್ರೆಂಡ್ , ಕೊಲೆಗೆ ಸಹಕರಿಸಿದ ಎಲ್ಲರೂ ಕಂಬಿ ಎಣಿಸುತ್ತಿದ್ದಾರೆ.