ಸ್ಕೂಟರ್ ಅನ್ನು ಅಟ್ಟಿಸಿಕೊಂಡು ಬಂದ ಬೀದಿನಾಯಿಗಳು: ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆದು ಇಬ್ಬರು ಮಹಿಳೆಯರು, ಮಗುವಿಗೆ ಗಾಯ


ಬೆರ್ಹಾಂಪುರ: ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡುವ ಅನುಭವ ಹೆಚ್ಚಿನವರಿಗೆ ಆಗುತ್ತಿರುತ್ತದೆ. ಇತ್ತೀಚೆಗೆ ಬೀದಿ ನಾಯಿಗಳು ದಾಳಿ ಮಾಡಿದ ಪರಿಣಾಮ  ಅಪ್ರಾಪ್ತ ಮಕ್ಕಳು ಮೃತಪಟ್ಟ ಘಟನೆ ಅಲ್ಲಲ್ಲಿ ವರದಿಯಾಗಿತ್ತು. ಇದು ಕೂಡಾ ಅಂತಹದ್ದೇ ಬೆಚ್ಚಿ ಬೀಳಿಸುವ ಘಟನೆಯಾಗಿದೆ. ಬೀದಿ ನಾಯಿಗಳ ಹಿಂಡೊಂದು ದಾಳಿ ನಡೆಸಲು ಬರುತ್ತಿದೆ ಎಂದು ಬೆದರಿದ ಸ್ಕೂಟರ್ ಸವಾರಿ ಮಾಡುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಮಗು ಕಾರಿಗೆ ಢಿಕ್ಕಿ ಹೊಡೆದು ಬಿದ್ದ ಘಟನೆ ಒಡಿಶಾದ ಬೆರ್ಹಾಂಪುರದ ಗಾಂಧಿನಗರ ಲೇನ್ ನಲ್ಲಿ ವರದಿಯಾಗಿದೆ. ಇದರ ಸಿಸಿಟಿವಿ ದೃಶ್ಯಾವಳಿಯ ವಿಡಿಯೋ ವೈರಲ್ ಆಗಿದೆ.

ಆದರೆ ಅದೃಷ್ಟವಷಾತ್ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮೂವರಿಗೂ ಗಾಯಗಳಾಗಿವೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ಘಟನೆ ಹಾಗೂ ಅಪಘಾತದ ದೃಶ್ಯ ಸೆರೆಯಾಗಿದೆ. ಗಾಯಾಳುಗಳನ್ನು ಸುಪ್ರಿಯಾ, ಸುಸ್ಮಿತಾ ಮತ್ತು ಅವರ ಮಗು ಎಂದು ಗುರುತಿಸಲಾಗಿದೆ.


ಈ ಮೂವರು ಸ್ಕೂಟರ್ ನಲ್ಲಿ ಬೆಳಗ್ಗೆ 6 ಗಂಟೆಗೆ ದೇವಸ್ಥಾನಕ್ಕೆಂದು ಹೋಗುತ್ತಿದ್ದರು. ಆಗ ಸುಮಾರು ಆರರಿಂದ ಎಂಟು ನಾಯಿಗಳು ಅವರನ್ನು ಹಿಂಬಾಲಿಸಲು ಪ್ರಾರಂಭಿಸಿದವು. ಆಗ, ಸ್ಕೂಟರ್‌ನ ವೇಗವನ್ನು ಹೆಚ್ಚಿಸಿದ್ದಾರೆ. ಪರಿಣಾಮ ಈ ದುರ್ಘಟನೆ ಸಂಭವಿಸಿದೆ. 

ಇಲ್ಲದಿದ್ದರೆ ನಾಯಿಗಳು ಹಿಂಬದಿಯಲ್ಲಿದ್ದವರನ್ನು ಖಂಡಿತಾ ಕಚ್ಚುತ್ತಿತ್ತು. ಪಟ್ಟಣದಲ್ಲಿ ಗಂಭೀರ ಪ್ರಮಾಣದಲ್ಲಿ ಕಂಡುಬರುವ ಬೀದಿ ನಾಯಿಗಳ ಹಾವಳಿಯನ್ನು ತಡೆಯಲು ಬರ್ಹಾಂಪುರ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅನ್ನು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.