-->
1000938341
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನಿರ್ಮಿಸಿದ ಮನೆಯ ಗೃಹ ಪ್ರವೇಶ:ಸ್ವಾಮೀಜಿಗಳಿಂದ ಆಶೀರ್ವಚನ: ಪ್ರವೀಣ್ ನೆಟ್ಟಾರು ಪ್ರತಿಮೆ ಅನಾವರಣ ಮಾಡಿದ ಸಂಸದ ನಳಿನ್ ಕಟೀಲ್

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನಿರ್ಮಿಸಿದ ಮನೆಯ ಗೃಹ ಪ್ರವೇಶ:ಸ್ವಾಮೀಜಿಗಳಿಂದ ಆಶೀರ್ವಚನ: ಪ್ರವೀಣ್ ನೆಟ್ಟಾರು ಪ್ರತಿಮೆ ಅನಾವರಣ ಮಾಡಿದ ಸಂಸದ ನಳಿನ್ ಕಟೀಲ್

ಬೆಳ್ಳಾರೆ

ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಬಿಜೆಪಿ ಪಕ್ಷದ ವತಿಯಿಂದ‌ ನಿರ್ಮಿಸಿ ನೀಡಿದ ನೂತನ ಮನೆಯ ಗೃಹ ಪ್ರವೇಶ ಏ.27 ರಂದು ನಡೆಯಿತು.
ಬೆಳಗ್ಗೆ 8:45ಕ್ಕೆ ಗಣಪತಿ ಹವನ, ಸತ್ಯನಾರಾಯಣ ಪೂಜೆಯೊಂದಿಗೆ ಗೃಹ ಪ್ರವೇಶ ನಡೆಯಿತು.ಸ್ವಾಮೀಜಿಗಳು, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದ ಪ್ರಮುಖರು ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.ನೂತನ ಮನೆಯ ಸಮೀಪದಲ್ಲಿ ನಿರ್ಮಿಸಿರುವ ಪ್ರವೀಣ್ ನೆಟ್ಟಾರು ಅವರ ಪ್ರತಿಮೆಯನ್ನು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾಡಿದರು. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ‌ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಕಾಣಿಯೂರು ಮಠದ ಶ್ರೀ ಮಹಾಬಲ ಸ್ವಾಮೀಜಿ ಅವರು ಆಗಮಿಸಿ ಆಶೀರ್ವಚನ ನೀಡಿದರು. ಆರ್‌ಎಸ್ಎಸ್ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಪ್ರಭಾಕರ್ ಭಟ್ ಅವರ ನೇತೃತ್ವದಲ್ಲಿ ಮಂಗಳ ನಿಧಿ ಸಮರ್ಪಣೆ ಕಾರ್ಯಕ್ರಮವು ನಡೆಯಿತು.
ಬಿಜೆಪಿ ವತಿಯಿಂದ ಮನೆ ನಿರ್ಮಾಣ

ದಕ್ಷಿಣ ಕನ್ನಡ ಲೋಕಸಭಾ ಸದಸ್ಯರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ 2700 ಚದರ ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸಲಾಗಿದೆ. ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಮನೆಯನ್ನು ನಿರ್ಮಿಸಲಾಗಿದೆ. ನೂತನ
ಮನೆಗೆ ‘ಪ್ರವೀಣ್ ನಿಲಯ’ ಎಂದು ಹೆಸರಿಡಲಾಗಿದೆ. ಕಳೆದ ನವೆಂಬರ್ 2ರಂದು ಪ್ರವೀಣ್ ನೆಟ್ಟಾರು ಅವರ ಮನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.
ಮುಗರೋಡಿ ಕನ್‌ಸ್ಟ್ರಕ್ಷನ್ ಕಂಪನಿ ಮನೆಯ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಕೇವಲ ಐದೂವರೆ ತಿಂಗಳಲ್ಲಿ ಹೊಸ ಮನೆಯ ಕೆಲಸ ಪೂರ್ಣವಾಗಿದೆ.

ಅರುಣ್ ಕುಮಾರ್ ಪುತ್ತಿಲ ವಿರುದ್ಧ ಹರಿಹಾಯ್ದ ಆರ್‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್
ಪ್ರವೀಣ್ ನೆಟ್ಟಾರು ಮನೆ ಗೃಹಪ್ರವೇಶಕ್ಕೆ ಆಗಮಿಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಾಧ್ಯಮ ಜೊತೆ ಮಾತನಾಡಿ ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ವಿರುದ್ಧ ವಾಗ್ದಾಳಿ ನಡೆಡಿಸಿದ್ದಾರೆ.ಅರುಣ್ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ, ದೇವಸ್ಥಾನದ ದುಡ್ಡು ಕೊಳ್ಳೆಹೊಡೆದ,ಮಹಿಳೆಗೆ ವಾಹನ ಡಿಕ್ಕಿ ಹೊಡೆದು ಅಲ್ಲೇ ಬಿಟ್ಚು ಹೋಗಿರುವ ಮತ್ತು ಹಿಂದುಗಳ ಮೇಲೆಯೇ ದೌರ್ಜನ್ಯ ನಡೆಸಿರುವ ವ್ಯಕ್ತಿ ಅರುಣ್ ಪುತ್ತಿಲ ಅಕ್ರಮ ಗೋ ಸಾಗಾಟ ಮಾಡುವಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದಾಗ ಅವರಲ್ಲಿ ಅರುಣ್ ಕೂಡಾ ಅದರಲ್ಲಿ ಒಬ್ಬನಾಗಿದ್ದ ಅಷ್ಟೇ. ಅದು ಬಿಟ್ಟು ಬೇರೆ ಹಿಂದುತ್ವದ ರಕ್ಷಣಾ ಕಾರ್ಯ ಅವನಿಂದ ನಡೆಯಲಿಲ್ಲ, ಕೇಂದ್ರದ ಗೃಹಸಚಿವ ಅಮಿತ್ ಶಾ ಮಾತನಾಡುವುದಾಗಿ ಹೇಳಿದಾಗ ಧಿಕ್ಕರಿಸಿದ ವ್ಯಕ್ತಿ ಅರುಣ್ ಪುತ್ತಿಲ, ಕಾರ್ಯಕರ್ತರು ಕೆಲವರು ಈ ವಿಚಾರ ತಿಳಿಯದೆ ಅವನ ಹಿಂದೆ ಓಡಾಡುತ್ತಿದ್ದಾರೆ ಅವರಿಗೆ ಸದ್ಯದಲ್ಲೇ ಈ ವಿಚಾರ ತಿಳಿಯಲಿದೆ ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ. ಈ ನಡುವೆ ಕಾರ್ಯಕ್ರಮದಿಂದ ಊಟಮಾಡಿ ನಳಿನ್‌ ಕುಮಾರ್ ಕಟೀಲ್ ಹೊರಡುವ ಸಮಯದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರೂ ಪ್ರವೀಣ್ ನೆಟ್ಟಾರು ಅವರ ಮನೆಗೆ ಆಗಮಿಸಿದ್ದು ಪರಸ್ಪರ ಇಬ್ಬರೂ ಮುಖಾಮುಖಿ ಆದರೂ ಮಾತನಾಡಲಿಲ್ಲ.

ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಭಜನಾ ಸಂಕೀರ್ತನೆ ನಡೆಯಿತು. ರಾತ್ರಿ 7 ಗಂಟೆಗೆ ಕಲ್ಲುರ್ಟಿ ದೈವದ ನೇಮ ನಡೆಯಲಿದೆ.

ಪುತ್ತೂರು ಶಾಸಕ ಸಂಜೀವ ಮಠಂದೂರು,ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬಿಜೆಪಿ ಸುಳ್ಯ ಕ್ಷೇತ್ರದ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಪುತ್ತೂರು ಅಭ್ಯರ್ಥಿ ಆಶಾ ತಿಮ್ಮಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮುಖಂಡರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಕಸ್ತೂರಿ ಪಂಜ, ಜಯಂತ ನಡುಬೈಲು, ಕಸ್ತೂರಿ ಪಂಜ, ಮುರಳೀಕೃಷ್ಣ ಹಸಂತಡ್ಕ,ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಆರ್ ಕೆ ಭಟ್ ಕುರುಂಬುಡೇಲು, ಶ್ರೀನಾಥ್ ಬಾಳಿಲ, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಸೇರಿ ಹಲವು ಮಂದಿ ಪ್ರಮುಖರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಪುತ್ತೂರು ಡಿವೈಎಸ್‌ಪಿ ‌ವೀರಯ್ಯ ಹಿರೇಮಠ್ ಅವರ ನೇತೃತ್ವದಲ್ಲಿ ಪುತ್ತೂರು, ಸುಳ್ಯ, ಬೆಳ್ಳಾರೆ,ಕಡಬ,ಸುಬ್ರಹ್ಮಣ್ಯ ಪೊಲೀಸರು,ಚುನಾವಣೆಗೆ ಆಗಮಿಸಿದ ಸೇನಾ ಸಿಬ್ಬಂದಿಗಳು ಭದ್ರತೆಯನ್ನು ಒದಗಿಸಿದ್ದರು.

Ads on article

Advertise in articles 1

advertising articles 2

Advertise under the article