ರಾತೋ ರಾತ್ರಿ ಕಾರ್ಪೊರೇಟರ್‌ಗೆ ಘೇರಾವ್‌: ಮಂಗಳೂರಿನಲ್ಲಿ ಜನಪ್ರತಿನಿಧಿ ವಿರುದ್ಧ ಮುತ್ತಿಗೆ ಹಾಕಿ ನಾಗರಿಕರ ಆಕ್ರೋಶ

ರಾತೋ ರಾತ್ರಿ ಕಾರ್ಪೊರೇಟರ್‌ಗೆ ಘೇರಾವ್‌: ಮಂಗಳೂರಿನಲ್ಲಿ ಜನಪ್ರತಿನಿಧಿ ವಿರುದ್ಧ ಮುತ್ತಿಗೆ ಹಾಕಿ ನಾಗರಿಕರ ಆಕ್ರೋಶ





ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾತೋರಾತ್ರಿ ಬಿಜೆಪಿ ಮಹಿಳಾ ಕಾರ್ಪೊರೇಟರ್‌ ಗೆ ಸ್ಥಳೀಯ ಜನರು ಮುತ್ತಿಗೆ ಹಾಕಿದ್ದಾರೆ. ಮಹಿಳೆಯರು ತಮ್ಮ ಕುಟುಂಬದೊಂದಿಗೆ ಕಾರ್ಪೊರೇಟರ್ ರಜನಿ ಕೋಟ್ಯಾನ್ ಅವರಿಗೆ ಮುತ್ತಿಗೆ ಹಾಕಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಎಲ್ಲಿಗೂ ಹೋಗಲು ಬಿಡದೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಮತ್ತು ಬೇಜವಾಬ್ದಾರಿ ವರ್ತನೆಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.



ದೇರೆಬೈಲ್ ಕೊಂಚಾಡಿಯಲ್ಲಿ ಇರುವ ಲ್ಯಾಂಡ್ ಲಿಂಕ್ಸ್ 3ನೇ ಅಡ್ಡ ರಸ್ತೆಗೆ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಳಪೆ ಗುಣಮಟ್ಟದ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ.

ಈ ಬಗ್ಗೆ ಸ್ಥಳೀಯ ನಾಗರಿಕರು ಹಲವು ಬಾರಿ ಕಾರ್ಪೊರೇಟರ್‌ ರಜನಿಯವರಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ, ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ.



ಮಾಡಿದ ಕಾಂಕ್ರೀಟ್ ಕಾಮಗಾರಿ ಒಂದೆರಡು ದಿನದಲ್ಲಿ ಬಿರುಕು ಬಿಟ್ಟಿದೆ. ರಸ್ತೆಯ ಇಕ್ಕೆಲದಲ್ಲಿ ಹೊಂಡ ಗುಂಡಿಗಳು ಹಾಗೆಯೇ ಇವೆ.. ಅಪಾಯಕಾರಿಯಾಗಿ ಪರಿಣಮಿಸಿರುವ ಈ ರಸ್ತೆಯಲ್ಲಿ ಈಗಾಗಲೇ ಹಲವು ಮಂದಿ ಬಿದ್ದು ಕೈಕಾಲು ಮುರಿದುಕೊಂಡಿದ್ಧಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.



ಸ್ಥಳೀಯ ಶಾಸಕರಾದ ಡಾ. ಭರತ್ ಶೆಟ್ಟಿ ಮತ್ತು ನೀವು ನಮ್ಮಲ್ಲಿಗೆ ಒಮ್ಮೆ ಬನ್ನಿ. ದ್ವಿಚಕ್ರ ವಾಹನದಲ್ಲಿ ನೀವೇ ಒಮ್ಮೆ ಸಂಚಾರ ಮಾಡಿ... ಆಗ ನಮ್ಮ ನಿಜವಾದ ಕಷ್ಟ ಗೊತ್ತಾಗುತ್ತದೆ ಎಂದು ಮಹಿಳೆಯವರು ರಜನಿ ಕೋಟ್ಯಾನ್ ಅವರಿಗೆ ತಮ್ಮ ಅಳಲು ತೋಡಿಕೊಂಡರು.



ಆರ್ಧ ಗಂಟೆಗಳ ಕಾಲ ಮುತ್ತಿಗೆ ಬಳಿಕ ಕೊನೆಗೂ ಕಾಮಗಾರಿ ಪ್ರದೇಶಕ್ಕೆ ಬಂದು ವೀಕ್ಷಿಸಿ ಆದ ತಪ್ಪನ್ನು ಸರಿಪಡಿಸುತ್ತೇನೆ ಎಂದು ಕಾರ್ಪೊರೇಟರ್ ರಜನಿ ಕೋಟ್ಯಾನ್ ಭರವಸೆ ನೀಡಿದ ಬಳಿಕ ಮಹಿಳೆಯರು ತಮ್ಮ ನಿವಾಸಗಳಿಗೆ ವಾಪಸ್ ಆದರು.


ಮೊಬೈಲ್ ಸ್ವಿಚ್ ಆಫ್!

ವಿಶೇಷವೆಂದರೆ, ಈ ಕಾರ್ಪೊರೇಟರ್ ಅವರದ್ದು ಮೊಬೈಲ್ ಸ್ವಿಚ್ ಆಫ್. ಪಾಲಿಕೆ ಎಲೆಕ್ಷನ್‌ನಲ್ಲಿ ಮತಯಾಚನೆ ಮಾಡಿ ಹೋದ ನಂತರ ಒಂದೋ ಎರಡೋ ಬಾರಿ ಇಲ್ಲಿ ಕಾಣ ಸಿಕ್ಕಿದ್ದಾರೆ. ಅವರನ್ನು ಮಾತಾಡಬೇಕೆಂದರೆ ಫೋನ್‌ನಲ್ಲಿ ಲಭ್ಯರಿಲ್ಲ. ನೋಡಲೇಬೇಕೆಂದರೆ ಮನೆಗೆ ಹೋಗಬೇಕು.. ಇದು ಸ್ಥಳೀಯರ ದೂರು..