ಕತ್ತೆಯ ಹಾಲಿನಿಂದ ಮಾಡುವ ಸ್ನಾನ ಮಹಿಳೆಯರನ್ನು ಸೌಂದರ್ಯರನ್ನಾಗಿಸುತ್ತದೆ : ಮನೇಕಾ ಗಾಂಧಿ


ಲಕ್ನೋ: ಕತ್ತೆಯ ಹಾಲಿನಿಂದ ತಯಾರಿಸಿದ ಸೋಪ್ ಸ್ತ್ರೀಯರನ್ನು ಬಹಳ ಸುಂದರವಾಗಿಸುತ್ತದೆ ಎಂದು ಬಿಜೆಪಿ ಸಂಸದೆ ಮೇನಕಾ ಗಾಂಧಿ ಹೇಳಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆಯುತ್ತಿದೆ.

ಉತ್ತರ ಪ್ರದೇಶ ರಾಜ್ಯದ ಸುಲ್ತಾನ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈಜಿಪ್ಟ್ ನ ಪ್ರಸಿದ್ಧ ರಾಣಿ ಕ್ಲಿಯೋಪಾಟ್ರಾ ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದರು. ಕತ್ತೆ ಹಾಲಿನಿಂದ ತಯಾರಿಸಿದ ಸೋಪುಗಳಿಗೆ ದಿಲ್ಲಿಯಲ್ಲಿ 500 ರೂ. ಬೆಲೆ ಇದೆ. ನಾವು ಮೇಕೆ ಹಾಲು ಮತ್ತು ಕತ್ತೆಯ ಹಾಲಿನೊಂದಿಗೆ ಸೋಪ್ ತಯಾರಿಸಲು ಏಕೆ ಪ್ರಾರಂಭಿಸಬಾರದು? ಎಂದು ಮೇನಕಾ ಗಾಂಧಿ ಹೇಳಿದ್ದಾರೆ.

ಲಡಾಖ್ ದಲ್ಲಿರುವ ಸಮುದಾಯವೊಂದು ಸೋಪ್ ತಯಾರಿಸಲು ಕತ್ತೆಯ ಹಾಲನ್ನೇ ಬಳಸುತ್ತದೆ. ನಾವು ಕತ್ತೆಗಳನ್ನು ನೋಡಿ ಎಷ್ಟು ದಿನವಾಯಿತು? ಅವುಗಳ ಸಂಖ್ಯೆ ಕುಸಿಯುತ್ತಿದೆ. ದೋಬಿಗಳು ಕೂಡ ಕತ್ತೆಗಳನ್ನು ಬಳಸುವುದನ್ನು ನಿಲ್ಲಿಸಿದ್ದಾರೆ. ಕತ್ತೆಗಳ ಸಂಖ್ಯೆ ಕ್ಷೀಣಿಸುತ್ತಿರುವುದನ್ನು ಗಮನಿಸಿದ ಸಮುದಾಯವೊಂದು ಕತ್ತೆಗಳಿಂದ ಹಾಲನ್ನು ಕರೆದು, ಆ ಹಾಲಿನಿಂದ ಸಾಬೂನು ತಯಾರಿಸುವುದನ್ನು ಪ್ರಾರಂಭಿಸಿತು. ಕತ್ತೆಗಳ ಹಾಲಿನಿಂದ ಮಾಡಿದ ಸೋಪು ಮಹಿಳೆಯರ ದೇಹವನ್ನು ಎಂದೆಂದಿಗೂ ಸುಂದರವಾಗಿಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಮರಗಳು ಕಣ್ಮರೆಯಾಗುತ್ತಿದೆ. ಪರಿಣಾಮ ಕಟ್ಟಿಗೆ ಬೆಲೆಯೂ ದುಬಾರಿಯಾಗುತ್ತಿದೆ. ಇದೇ ಕಾರಣಕ್ಕೆ ಅಂತ್ಯ ಸಂಸ್ಕಾರದ ವೆಚ್ಚವೂ ಹೆಚ್ಚಾಗಿದೆ. ಮರದ ಬೆಲೆ ಎಷ್ಟು ಹೆಚ್ಚಾಗಿದೆ ಎಂದರೆ ಸಾವಿನಲ್ಲೂ ಜನತೆ ತಮ್ಮ ಕುಟುಂಬವನ್ನು ಮತ್ತಷ್ಟು ಬಡತನಕ್ಕೆ ತಳ್ಳುತ್ತಿದ್ದಾರೆ. ಮರಕ್ಕೆ 15,000 ರಿಂದ 20,000 ರೂ. ನೀಡುವುದಕ್ಕಿಂತ ನಾವು ಹಸುವಿನ ಸಗಣಿಗೆ ಸುಗಂಧ ದ್ರವ್ಯವನ್ನು ಸೇರಿಸಿ ಮೃತದೇಹವನ್ನು ಸುಡಬಹುದು. ಪರಿಣಾಮ ಶವಸಂಸ್ಕಾರದ ವೆಚ್ಚವನ್ನು 1,500 ರೂ.ನಿಂದ 2,000 ರೂ.ವರೆಗೆ ಕಡಿಮೆ ಮಾಡುತ್ತದೆ. ಅಲ್ಲದೇ ಹಸುವಿನ ಸಗಣಿಯಿಂದ ಮಾಡಿದ ಮರದ ದಿಮ್ಮಿಗಳನ್ನು ಮಾರಾಟ ಮಾಡುವ ಮೂಲಕ ಲಕ್ಷ ಲಕ್ಷ ಆದಾಯ ಗಳಿಸಬಹುದು ಎಂದು ಮೇನಕಾ ಗಾಂಧಿ ಹೇಳಿದ್ದಾರೆ.