ಮಂಗಳೂರು:  ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಸಂಜೆ ಪ್ರಕಟವಾಗಲಿದೆ. ಈ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ನಡುವೆ ಕುತೂಹಲದ ಕ್ಷೇತ್ರ ಮಂಗಳೂರು ಉತ್ತರದಲ್ಲಿ ಶಾಸಕ ಡಾ ವೈ ಭರತ್ ಶೆಟ್ಟಿ ಗೆ ಬಿಜೆಪಿ ಟಿಕೆಟ್ ಖಚಿತ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಬಾರಿ ಕರಾವಳಿ ಜಿಲ್ಲೆಯ ಕೆಲ ಬಿಜೆಪಿ ಶಾಸಕರನ್ನು ಬದಲಾಯಿಸಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಂತ್ರಗಾರಿಕೆ ಬಿಜೆಪಿ ಮಾಡುತ್ತಿದೆ.  ಈ ಕಾರಣದಿಂದ ಕ್ಷೇತ್ರದಲ್ಲಿ ಅಸಮಾಧಾನ ಇರುವ ಸುಳ್ಯದ ಕ್ಷೇತ್ರದ ಶಾಸಕ ಅಂಗಾರ ಮತ್ತು ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಗೆ ಟಿಕೆಟ್ ನಿರಾಕರಣೆ ಆಗಲಿದೆ ಎಂಬುದು ಖಚಿತ ಮಾಹಿತಿ. ಇನ್ನೂ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಶಾಸಕ ವೇದವ್ಯಾಸ ಕಾಮತ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗೆ ಟಿಕೆಟ್ ಖಚಿತ ಎಂದು ಮಾತುಗಳು ಕೇಳಿ ಬರುತ್ತಿದೆ.
ಇದರ ನಡುವೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಮತ್ತು ಮೂಡಬಿದಿರೆ ಶಾಸಕ ಉಮನಾಥ ಕೋಟ್ಯಾನ್ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ   ಪಕ್ಷದ ಹೈಕಮಾಂಡ್ ನಲ್ಲಿ ಗೊಂದಲವಿದೆ ಎಂದು ಹೇಳಲಾಗಿತ್ತು. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಕಣ್ಣಿಟ್ಟಿದ್ದರು. ಆದರೆ ಪಕ್ಷದ ಮೂಲಗಳ ಪ್ರಕಾರ ಭರತ್ ಶೆಟ್ಟಿ ಅವರಿಗೆ ಟಿಕೆಟ್ ಖಚಿತವಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಸಂಜೆ ಘೋಷಣೆಯಾಗಲಿರುವ ಬಿಜೆಪಿ ಪಟ್ಟಿ ಕುತೂಹಲ ಕೆರಳಿಸಿದೆ.
 
 
 
 
 
 
 
 
 
 
 
 
 
 
 
 
 
 
