ಜೀವನ ನಿರ್ವಹಿಸಲು ಸಾಬೂನು ಮಾರಾಟ ಮಾಡಲು ಬಿಡುತ್ತಿಲ್ಲ ಕಾಮುಕರು: ಅಳಲು ತೋಡಿಕೊಂಡ ಪಂಚಭಾಷಾ ನಟಿ


ಕೊಚ್ಚಿ: ನಟಿ ಐಶ್ವರ್ಯಾ ಅಲಿಯಾಸ್ ಐಶ್ವರ್ಯಾ ಭಾಸ್ಕರನ್ ಅಂದರೆ ಗೊತ್ತಿದೆಯೇ. ಆದರೆ ಹಿರಿಯ ನಟಿ ಲಕ್ಷ್ಮೀ ಅವರ ಪುತ್ರಿ ಅಂದರೆ ಗೊತ್ತಾಗಬಹುದೇನೋ?.. ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡಿರುವ ಇವರು ಕನ್ನಡದಲ್ಲಿ ಪಾಂಡವರು ಹಾಗೂ ಒಗ್ಗರಣೆ ಸೇರಿದಂತೆ ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಐಶ್ವರ್ಯಾ, ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಬಟರ್‌ಸ್, ನರಸಿಂಹಂ ಮತ್ತು ಪ್ರಜಾ ಸಿನಿಮಾಗಳಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಜಾಕ್‌ಪಾಟ್, ಸತ್ಯಮೇವ ಜಯತೆ, ಶಾರ್ಜಾ ಮತ್ತು ನೋಟ್‌ಬುಕ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ, ಕಿರುತೆರೆಯಲ್ಲೂ ಮಿಂಚಿದ್ದಾರೆ. ಆದರೆ, ಇತ್ತೀಚಿನ ದಿನಗಳಿಂದ ಐಶ್ವರ್ಯಾ ಸಿನಿಮಾ ಮತ್ತು ಕಿರುತೆರೆಯಿಂದ ದೂರ ಉಳಿದಿದ್ದಾರೆ. ಸದ್ಯ ತನಗೆ ಯಾವುದೇ ಕೆಲಸವಿಲ್ಲ. ನನ್ನಲ್ಲಿ ಹಣವು ಇಲ್ಲ. ಹೀಗಾಗಿ ಹೊಟ್ಟೆಪಾಡಿಗಾಗಿ ಬೀದಿ ಬೀದಿಗಳಲ್ಲಿ ಸಾಬೂನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದೇನೆ. ಸಿನಿಮಾದಿಂದ ಯಾವುದೇ ಅವಕಾಶಗಳು ಬರುತ್ತಿಲ್ಲ. ಯಾರಾದರೂ ಕರೆದು ಅವಕಾಶ ಕೊಡುತ್ತಾರೇನೋ ಎಂದು ಕಾಯುತ್ತಿದ್ದೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದರು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೇಲಾಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಐಶ್ವರ್ಯಾ ಭಾಸ್ಕರನ್ ತಮ್ಮ “ಮಲ್ಟಿ ಮಮ್ಮಿ” ಹೆಸರಿನ ಯೂಟ್ಯೂಬ್ ಚಾನೆಲ್ ಮೂಲಕ ವಿವರಿಸಿದ್ದಾರೆ. ಕಿರುಕುಳ ನೀಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೊಟ್ಟೆಪಾಡಿಗಾಗಿ ಕಷ್ಟಪಟ್ಟು ಸಾಬೂನು ಮಾರಾಟ ಮಾಡಿ ಜೀವನ ಸಾಗಿಸಿದರು. ಕೆಲ ದುಷ್ಟರು ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ ಎಂದು ಐಶ್ವರ್ಯಾ ಬೇಸರ ಹೊರಹಾಕಿದ್ದಾರೆ.

ಅನೇಕರು ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇದು ನನ್ನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ನನ್ನ ಪುತ್ರಿಯ ಸಲಹೆ ಮೇರೆಗೆ ನಾನು ಈ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದೇನೆ. ಸಾಬೂನು ಮಾರಾಟ ಮಾಡಲು ನನ್ನ ಫೋನ್ ನಂಬರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡ ಬಳಿಕ ಈ ಕಿರುಕುಳಗಳು ಆರಂಭವಾಗಿದೆ. ಅಂದಿನಿಂದ ಅವರಿಗೆ ಅನುಚಿತ ಮೆಸೇಜ್‌ಗಳು ಮತ್ತು ಅಶ್ಲೀಲ ಫೋಟೋಗಳು ನಿರಂತರವಾಗಿ ಬರುತ್ತಿವೆ. ಅದರಲ್ಲೂ ಕೆಲ ಕಾಮುಕರು ತಮ್ಮ ಖಾಸಗಿ ಭಾಗದ ಫೋಟೋಗಳನ್ನು ಸಹ ಶೇರ್ ಮಾಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ವಿಚಲಿತಗೊಂಡಿರುವುದಾಗಿ ಐಶ್ವರ್ಯಾ ಹೇಳಿಕೊಂಡಿದ್ದಾರೆ.

ವಿಡಿಯೋವನ್ನು ಸಾಕ್ಷಿಯಾಗಿ ಇಟ್ಟುಕೊಂಡು ಸೈಬರ್ ಕ್ರೈಮ್‌ಗೆ ಮೊರೆಹೋಗಲು ನಾನು ಬಯಸುವುದಿಲ್ಲ. ಆದರೆ, ಕಿರುಕುಳ ಇದೇ ರೀತಿ ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಟಿಯಾಗಿ ಹೆಚ್ಚು ಅವಕಾಶಗಳು ದೊರಕದಿರುವ ಹಿನ್ನೆಲೆಯಲ್ಲಿ ಸಾಬೂನು ವ್ಯಾಪಾರವೇ ತಮ್ಮ ಆದಾಯದ ಮೂಲವಾಗಿದೆ. ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯವುಳ್ಳ ವಿಡಿಯೋವನ್ನು ಶೇರ್ ಮಾಡಿದ ನಂತರ ಅನೇಕ ನೆಟ್ಟಿಗರು ನಟಿಯನ್ನು ಬೆಂಬಲಿಸಿದ್ದಾರೆ. ಹೀಗಾಗಿ ಎಲ್ಲ ಅಭಿಮಾನಿಗಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

ಅಂದಹಾಗೆ 1994ರಲ್ಲಿ ತನ್ನೀರ್ ಅಹ್ಮದ್ ಎಂಬುವರನ್ನು ಐಶ್ವರ್ಯಾ ಮದುವೆಯಾಗಿದ್ದರು. ಆದರೆ, ಮದುವೆಯಾದ ಮೂರೇ ವರ್ಷಕ್ಕೆ ಇವರು ಆತನಿಂದ ಬೇರ್ಪಟ್ಟಿದ್ದಾರೆ. ವಿಚ್ಛೇದನ ಪಡೆಯುವುದು ಅನಿವಾರ್ಯವಾಗಿತ್ತು. ಮದುವೆಯಾದ ಆರೇ ತಿಂಗಳಿಗೆ ಅವನೊಂದಿಗಿನ ಸಂಬಂಧ ಹಳಸಿತ್ತು. ಮಗು ಒಂದೂವರೆ ವರ್ಷ ಇರುವಾಗಲೇ ನಾವಿಬ್ಬರು ವಿಚ್ಛೇದನ ಪಡೆದುಕೊಂಡೆವು. ಇದೀಗ ಮಾಜಿ ಪತಿ ಮತ್ತು ಆತನ ಪತ್ನಿಯೊಂದಿಗೆ ಒಳ್ಳೆಯ ಬಾಂಧವ್ಯವಿದೆ ಎಂದು ಐಶ್ವರ್ಯಾ ಹೇಳಿದ್ದಾರೆ.

ನನ್ನ ಕುಟುಂಬಕ್ಕೆ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇನೆ. ನನ್ನ ವೃತ್ತಿ ಜೀವನದ ಅವಧಿ ಕೇವಲ ಮೂರೇ ವರ್ಷವಿತ್ತು. ನಾನು ನಟಿಸಲು ಪ್ರಾರಂಭಿಸಿದ ಮೂರು ವರ್ಷಗಳಲ್ಲೇ ನನ್ನ ಮದುವೆಯಾಯಿತು. ಹೀಗಾಗಿ ನಾನು ಚಿತ್ರರಂಗವನ್ನು ತೊರೆದೆ. ಪ್ರತಿಯೊಬ್ಬರಿಗೂ ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ನಯನತಾರಾ ತರಹ ಸ್ಟಾರ್ ನಾಯಕಿಯಾಗಿ ಹೊರ ಹೊಮ್ಮುವ ಅದೃಷ್ಟ ಇರುವುದಿಲ್ಲ. ನನಗೆ ಎರಡನೇ ಇನ್ನಿಂಗ್ಸ್ ಕೈ ಹಿಡಿಯಲಿಲ್ಲ. ಸದ್ಯ ನನ್ನ ಪುತ್ರಿಗೆ ಉತ್ತಮವಾದದ್ದನ್ನು ನೀಡಲು ನಾನು ಬಯಸುತ್ತೇನೆ. ನಾನು ಅದಕ್ಕಾಗಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಬಳಿ ಯೂಟ್ಯೂಬ್ ಚಾನೆಲ್ ಇದೆ. ಅದರ ಕೆಲಸ ಮುಗಿದ ಬಳಿಕ ಸೋಪ್ ಮಾರಾಟ ಮಾಡುತ್ತೇನೆ. ನನ್ನ ಪುತ್ರಿಗಾಗಿ ನಾನು ಬದುಕುತ್ತಿದ್ದೇನೆ. ಸ್ವತಂತ್ರ ವ್ಯಕ್ತಿಯಾಗಿ ಇರಲು ಹೆಮ್ಮೆ ಇದೆ ಎಂದು ಐಶ್ವರ್ಯಾ ಈ ಹಿಂದೆ ತಿಳಿಸಿದ್ದರು.