
ಕಡಬ: ಕಾರು - ತೂಫಾನ್ ವಾಹನದ ನಡುವೆ ಭೀಕರ ಅಪಘಾತ - ಮಗು ಸೇರಿದಂತೆ ನಾಲ್ವರು ಮೃತ್ಯು
ಕಡಬ: ಕಾರು ಹಾಗೂ ತೂಫಾನ್ ವಾಹನಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಈ ಅಪಘಾತದಲ್ಲಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರು ಮತ್ತು ತೂಫಾನ್ ವಾಹನ ಮುಖಾಮುಖಿಯಾಗಿ ಬಂದು ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಕಾರು ಕುಕ್ಕೆ ಕಡೆಗೆ ತೆರಳುತ್ತಿತ್ತು ಹಾಗೂ ತೂಫನ್ ವಾಹನ ಧರ್ಮಸ್ಥಳದೆಡೆಗೆ ತೆರಳುತ್ತಿತ್ತು. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದು ಮಗು, ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಮೃತಪಟ್ಟವರು ಬೇಳೂರು ಮೂಲದವರು ಎಂದು ತಿಳಿದು ಬಂದಿದೆ. ತೂಫನ್ ವಾಹನದಲ್ಲಿದ್ದವರು ಹಾಸನದ ಮೂಲದವರು ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ.