80ಲಕ್ಷ ರೂ ಲಾಟರಿ ಬಹುಮಾನ ಗೆದ್ದ ಮರುದಿನವೇ ಯುವಕನ ಸಾವು: ಸ್ನೇಹಿತ ಅರೆಸ್ಟ್
Thursday, April 6, 2023
ತಿರುವನಂತಪುರ: ಲಾಟರಿಯಲ್ಲಿ 80 ಲಕ್ಷ ರೂ. ಗೆದ್ದ ಮಾರನೇ ದಿನವೇ ಯುವಕನೋರ್ವನು ನಿಗೂಢವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಪಂಗೋಡೆ ಮೂಲದ ಸಜೀವ್ (35) ಮೃತಪಟ್ಟ ದುರ್ದೈವಿ. ಆತನು ಸ್ನೇಹಿತರೊಂದಿಗೆ ಸೇರಿ ಮದ್ಯ ಪಾರ್ಟಿ ಮಾಡುತ್ತಿದ್ದ ವೇಳೆ ಮಣ್ಣಿನ ದಿಬ್ಬದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದ. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಆದ್ದರಿಂದ ಪೊಲೀಸ್ ತನಿಖೆ ವೇಳೆ ಈ ಸಾವಿಗೆ ಆತನ ಗೆಳೆಯ ಮಾಯಾವಿ ಸಂತೋಷ್ ಕಾರಣ ಎಂದು ತಿಳಿದು ಬಂದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವಾರ ಕೇರಳ ಸರ್ಕಾರ ವಿತರಿಸಿದ ಲಾಟರಿಯಿಂದ ಟೈಲ್ಸ್ ಕೆಲಸಗಾರ ಸಜೀವನ್ ಅವರಿಗೆ 80 ಲಕ್ಷ ರೂ. ಜಾಕ್‌ಪಾಟ್ ಹೊಡೆದಿತ್ತು. ತೆರಿಗೆ ಕಡಿತದ ಬಳಿಕ ಸಜೀವನ್ ಖಾತೆಗೆ 49.75 ಲಕ್ಷ ರೂ. ಜಮಾ ಆಗಿತ್ತು. ಆದ್ದರಿಂದ ಲಾಟರಿ ಗೆದ್ದ ಸಂತೋಷದಲ್ಲಿ ಸಜೀವನ್ ಆತ್ಮೀಯರಿಗೆ ಪಾರ್ಟಿ ಏರ್ಪಡಿಸಿದ್ದರು.
ಪಾರ್ಟಿಯ ನಡುವೆ ಮದ್ಯದ ಅಮಲಿನಲ್ಲಿ ಸಜೀವನ್ ಹಾಗೂ ಗೆಳೆಯ 'ಮಾಯಾವಿ' ಸಂತೋಷ್ ನಡುವೆ ಜಗಳ ನಡೆದಿತ್ತು. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿ ತಾಳ್ಮೆ ಕಳೆದುಕೊಂಡ ಮಾಯಾವಿ ಸಂತೋಷ್, ಸಜೀವನ್‌ನನ್ನು ಮಣ್ಣಿನ ದಿಬ್ಬದಿಂದ ಕೆಳಗೆ ದೂಡಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಗಂಭೀರ ಸ್ಥಿತಿಯಲ್ಲಿದ್ದ ಸಜೀವನ್ 10 ಗಂಟೆಗಳ ಬಳಿಕ ನಿಧನನಾಗಿದ್ದಾನೆ.
ಸಜೀವನ್ ಸಾವಿಗೆ ಮಾಯಾವಿ ಕಾರಣ ಎಂದು ಆತನ ಕುಟುಂಬದವರು ಆರೋಪಿಸಿ ದೂರು ದಾಖಲಿಸಿದ್ದಾರೆ. ಪ್ರಕರಣ ಪೊಲೀಸರು ತಕ್ಷಣ ಆತನನ್ನು ಬಂಧಿಸಿದ್ದಾರೆ.