ಮಂಗಳೂರು: ಜಿಲ್ಲಾ ಕಾರಾಗೃಹಕ್ಕೆ ದಿಢೀರ್ ಪೊಲೀಸ್ ದಾಳಿ - 300ಕ್ಕೂ ಅಧಿಕ ಮಂದಿ ಆರಕ್ಷಕರಿಂದ ತಪಾಸಣೆ
Sunday, April 2, 2023
ಮಂಗಳೂರು: ನಗರದ ಜಿಲ್ಲಾ ಕಾರಾಗೃಹಕ್ಕೆ ರವಿವಾರ ಮಧ್ಯಾಹ್ನ ವೇಳೆಗೆ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಆರ್.ಜೈನ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಈ ವೇಳೆ ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್, ಎಸಿಪಿಗಳು, ಇನ್ಸ್‌ಪೆಕ್ಟರ್ ಗಳು, ಪಿಎಸ್ಐಗಳು ಸೇರಿದಂತೆ 300ಕ್ಕೂ ಅಧಿಕ ಮಂದಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದಾರೆ. ಜೈಲಿನಲ್ಲಿ ಅಕ್ರಮ ಚಟುವಟಿಕೆ ಮಾಹಿತಿ ಹಿನ್ನೆಲೆಯಲ್ಲಿ ದಿಢೀರ್ ತಪಾಸಣೆ ನಡೆಸಲಾಗಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸತತ 1:15 ಗಂಟೆ ಜೈಲಿನೊಳಗಡೆ ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ವಿಚಾರಣಾಧೀನ ಕೈದಿಗಳಲ್ಲಿ ಬೀಡಿ-ಸಿಗರೇಟ್, ಗುಟ್ಕಾ, ತಂಬಾಕು ಪ್ಯಾಕೆಟ್ ಬಿಟ್ಟರೆ ಬೇರೇನು ಪತ್ತೆಯಾಗಿಲ್ಲ.
ಬಳಿಕ ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಪ್ರತಿಕ್ರಿಯಿಸಿ, ಅಧಿಕಾರಿಗಖು ಸಿಬ್ಬಂದಿ ಪ್ಲ್ಯಾನ್ ಮಾಡಿ ಈ ದಾಳಿ ನಡೆಸಿದ್ದೇವೆ. ಬೀಡಿ ಸಿಗರೇಟ್ ತಂಬಾಕು ಬಿಟ್ಟು ಬೇರೆನೂ ಸಿಕ್ಕಿಲ್ಲ. ಜೈಲು ಅಧಿಕಾರಿಗಳು ಜೈಲು ಪ್ರವೇಶಕ್ಕೆ ಮುನ್ನ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಜೈಲ್ ಸೂಪರಿಂಟೆಂಡೆಂಟ್ ಜೊತೆ ಚರ್ಚೆ ನಡೆಸಲಾಗಿದೆ. ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದ್ದೇವೆ. ಆದರೆ ಸದ್ಯಕ್ಕೆ ಈ ಬಗ್ಗೆ ಯಾವುದೇ ಪೂರಕ ಸಾಕ್ಷ್ಯಗಳು ಸಿಕ್ಕಿಲ್ಲ. ಕಾಲ ಕಾಲಕ್ಕೆ ತಪಾಸಣೆ ನಡೆಸುತ್ತಿದ್ದರೆ ಅಕ್ರಮಕ್ಕೆ ಕಡಿವಾಣ ಬೀಳುತ್ತದೆ. ಮುಂದಿನ ದಿನಗಳಲ್ಲಿಯೂ ತಪಾಸಣೆ ಮುಂದುವರಿಸುತ್ತೇವೆ ಎಂದು ಹೇಳಿದರು.