ಬೆಂಗಳೂರು: ಪ್ರಿಯಕರನನ್ನು ಭೇಟಿ ಮಾಡಲೆಂದು ಬಂದಿದ್ದ ಗಗನಸಖಿ ಫ್ಲ್ಯಾಟ್ ನ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಪ್ರಕರಣವೊಂದು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದಿತ್ತು. ಆದರೆ ಇದು ಆತ್ಮಹತ್ಯೆಯೋ?, ಕೊಲೆಯೋ? ಎಂಬ ಬಗ್ಗೆ ಶಂಕೆ ವ್ಯಕ್ತವಾಗಿ, ಇದುವರೆಗೂ ಪ್ರಕರಣ ನಿಗೂಢವಾಗಿತ್ತು. ಆದರೆ, ಇದೀಗ ಗಗನಸಖಿಯ ಬಾಯ್‌ಫ್ರೆಂಡ್ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ, ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ.
ಹಿಮಾಚಲಪ್ರದೇಶ ಮೂಲದ ಅರ್ಚನಾ ಧೀಮನ್ (28) ಮೃತಪಟ್ಟ ಗಗನಸಖಿ. ಈಕೆ ಕೋರಮಂಗಲದ 8ನೇ ಬ್ಲಾಕ್‌ನ ರೇಣುಕಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ತಾನು ವಾಸವಿದ್ದ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದಳು. ಆರಂಭದಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಶಂಕಿಸಲಾಗಿತ್ತು. ಆದರೆ ಅರ್ಚನಾ ಬಾಯ್‌ಫ್ರೆಂಡ್ ಅನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ ವೇಳೆ ಅನುಮಾನಾಸ್ಪದಾ ಪ್ರಕರಣಕ್ಕೆ ಮಹತ್ತರ ತಿರುವು ದೊರಕಿದೆ.
ಪೊಲೀಸರು ಅರ್ಚನಾ ಬಾಯ್‌ಫ್ರೆಂಡ್ ಆದೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆಯನ್ನು ಬಾಲ್ಕನಿಯಿಂದ ತಳ್ಳಿ ಕೊಲೆ ಮಾಡಿರುವುದಾಗಿ ಆತ ತನ್ನೊಪ್ಪಿಕೊಂಡಿದ್ದಾನೆ. ಮದುವೆ ಆಗಲು ಒಪ್ಪದಿದ್ದರೆ ಅರ್ಚನಾ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಮೃತಪಟ್ಟ ದಿನವೂ ಕೂಡ ಇದೇ ಬೆದರಿಕೆ ಮುಂದುವರಿಸಿದ್ದಳು. ಆದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆಯಿತು. ಅಂತಿಮವಾಗಿ ಆಕೆಯನ್ನು ಬಾಲ್ಕನಿಯಿಂದ ತಳ್ಳಿ ಕೊಲೆ ಮಾಡಿದ್ದೇನೆ ಎಂದು ಆದೇಶ್ ತಪ್ಪೊಪ್ಪಿಕೊಂಡಿದ್ದಾನೆ.
ಮೃತ ಅರ್ಚನಾ ಅಂತಾರಾಷ್ಟ್ರೀಯ ವಿಮಾನಯಾನ ಕಂಪೆನಿಯೊಂದರಲ್ಲಿ ಗಗನಸಖಿಯಾಗಿ ವೃತ್ತಿ ನಿರ್ವಹಿಸುತ್ತಿದ್ದಳು. ಆಕೆಯ ಪ್ರಿಯಕರ ಸಾಫ್ಟ್‌ವೇರ್ ಇಂಜಿನಿಯರ್ ಆದೇಶ್ ನಗರದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಆರು ತಿಂಗಳ ಹಿಂದೆ ಸ್ನೇಹಿತರ ಮೂಲಕ ಅರ್ಚನಾ ಮತ್ತು ಆದೇಶ್ ಪರಿಚಿತಗೊಂಡಿದ್ದರು. ಈ ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ಪ್ರೀತಿಸಲು ಆರಂಭಿಸಿದ್ದರು. ಆದರೆ ಕೆಲವಿಚಾರಗಳಲ್ಲಿ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು. ಆದ್ದರಿಂದ ಇಬ್ಬರ ನಡುವೆ ಆಗಾಗ ಜಗಳವಾಡುತ್ತಿದ್ದರು ಎನ್ನಲಾಗಿದೆ.
ಕಾರ್ಯನಿಮಿತ್ತ ದುಬೈನಲ್ಲಿದ್ದ ಅರ್ಚನಾ ದುಬೈನಿಂದ ಬೆಂಗಳೂರಿಗೆ ಬಂದಿದ್ದಳು. ಈ ನಾಲ್ಕು ದಿನ ಇಬ್ಬರು ಜೊತೆಗಿದ್ದರು. ಕಳೆದ ಶುಕ್ರವಾರ ಸಂಜೆ ಕೋರಮಂಗಲದ ಫೋರಂ ಮಾಲ್‌ನಲ್ಲಿ ಸಿನಿಮಾಕ್ಕೆ ತೆರಳಿದ್ದರು. ರಾತ್ರಿ ಸಿನಿಮಾ ನೋಡಿಕೊಂಡು ಅಪಾರ್ಟ್‌ಮೆಂಟ್‌ಗೆ ಬಂದಿದ್ದು, ಇಬ್ಬರೂ ಸೇರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದ್ದು ವಾಗ್ವಾದವಾಗಿದೆ. ಮಧ್ಯರಾತ್ರಿ 12 ಗಂಟೆಗೆ ಅರ್ಚನಾ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಳು. ಈ ವೇಳೆ ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾಳೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರು ಪೊಲೀಸರು ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಅರ್ಚನಾ ಪ್ರಿಯಕರ ಆದೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ತಪ್ರೊಪ್ಪಿಕೊಂಡಿದ್ದಾನೆ.