ಯಾವುದೇ ಕಾರಣಕ್ಕೂ ವರುಣಾದಿಂದ ವಿಜಯೇಂದ್ರ ಸ್ಪರ್ಧೆ ಇಲ್ಲ: ಸ್ಪರ್ಧೆ ಗೊಂದಲಕ್ಕೆ ಯಡಿಯೂರಪ್ಪ ತೆರೆ





ಮೈಸೂರು: ವರುಣಾ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪುತ್ರ ಬಿವೈ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎನ್ನುವ ಊಹಾಪೋಹಕ್ಕೆ ಬಿ.ಎಸ್‌. ಯಡಿಯೂರಪ್ಪ  ತೆರೆ ಎಳೆದಿದ್ದಾರೆ. 

ವರುಣಾದಿಂದ ವಿಜಯೇಂದ್ರ‌ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ಅವರು , ವರುಣಾದಲ್ಲಿ ವಿಜಯೇಂದ್ರ ನಿಲ್ಲಬೇಕು ಎಂಬ ಒತ್ತಡ ಇದ್ದರೂ ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಬೇಕು ಅಂತ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ವರುಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿವೈ ವಿಜಯೇಂದ್ರ ಹೆಸರು ಕೇಳಿ ಬರುತ್ತಿದ್ದ ನಡುವೆ ಮೈಸೂರಿಗೆ ಬಿಎಸ್‌ವೈ ಭೇಟಿ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಮೂಡಿಸಿತ್ತು. ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧಿಸುವುದಾಗಿ ಬಿಎಸ್‌ವೈ ಸ್ಪಷ್ಟಪಡಿಸಿದ್ದಾರೆ.

ವಿಜಯೇಂದ್ರರನ್ನು ನಿಲ್ಲಿಸುವಂತೆ ಬಿಎಸ್‌ ಯಡಿಯೂರಪ್ಪ ಅವರಿಗೆ ಬಿಜೆಪಿ ಬ್ಲ್ಯಾಕ್‌ಮೇಲ್‌: ರಮೇಶ್‌ ಬಾಬು

 ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿವೈ ವಿಜಯೇಂದ್ರರನ್ನು ನಿಲ್ಲಿಸುವಂತೆ  ಯಡಿಯೂರಪ್ಪ ಅವರಿಗೆ bjp ಬ್ಲ್ಯಾಕ್‌ಮೇಲ್‌  ಮಾಡುತ್ತಿದೆ ಎಂದು ಕಾಂಗ್ರೆಸ್‌ ವಕ್ತಾರ ರಮೇಶ್‌ ಬಾಬು ಆರೋಪ ಮಾಡಿದ್ದಾರೆ. 

ಯಡಿಯೂರಪ್ಪ ಅವರನ್ನು ಬ್ಲ್ಯಾಕ್‌ಮೇಲ್‌ ಮಾಡುವ ಪ್ರಯತ್ನ  ಬಿಜೆಪಿ ಮುಂದುವರಿಸಿದೆ. ನಿನ್ನೆ ಅವರ ಮೇಲೆ ಒತ್ತಡ ಹಾಕಿ ಅವರ ಪುತ್ರ ವಿಜಯೇಂದ್ರ ಅವರನ್ನು ವರುಣಾದಲ್ಲಿ ನಿಲ್ಲಿಸಲು ಒತ್ತಾಯಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. 

“ಯಡಿಯೂರಪ್ಪ ಅವರನ್ನು ಬಳಸಿಕೊಂಡು ವಿಜಯೇಂದ್ರರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲು ಬಿಜೆಪಿ ಮುಂದಾಗುತ್ತಿದೆ. ಯಡಿಯೂರಪ್ಪ ಅವರು ವಿಜಯೇಂದ್ರರನ್ನು ವಿಧಾನಪರಿಷತ್ ಸದಸ್ಯ ಮಾಡಿ ರಾಜ್ಯ ಸಂಪುಟದಲ್ಲಿ ಹಾಗೂ ರಾಘವೇಂದ್ರರನ್ನು ಕೇಂದ್ರ ಸಂಪುಟದಲ್ಲಿ ಸೇರಿಸುವಂತೆ ಬಿಜೆಪಿ ನಾಯಕರಿಗೆ ತಿಳಿಸಿದರೂ ಇದುವರೆಗೂ ಯಾವುದೂ ಸಾಧ್ಯವಾಗಿಲ್ಲ. ವಿಜಯೇಂದ್ರ ಮೇಲೆ ಐದಾರೂ ಐಡಿ ಹಾಗೂ ಐಟಿ ಪ್ರಕರಣಗಳು ಬಾಕಿ ಇವೆ. ಇವುಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರ ವಿರುದ್ಧ ವಿಜಯೇಂದ್ರರನ್ನು ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ” ಎಂದು ರಮೇಶ್‌ ಬಾಬು ಆರೋಪಿಸಿದ್ದಾರೆ.

“ಯಡಿಯೂರಪ್ಪ ಅವರು ಆರು ತಿಂಗಳ ಮುನ್ನವೇ ಶಿಕಾರಿಪುರದಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡುವುದಾಗಿ ತಿಳಿಸಿದ್ದರು. ಆದರೆ ಈಗ ವರುಣಾದಲ್ಲಿ ಸ್ಪರ್ಧಿಸುವ ಬಗ್ಗೆ ಒತ್ತಡ ಹಾಕುತ್ತಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಪಟ್ಟಿ ಇನ್ನು ಬಿಡುಗಡೆ ಮಾಡಿಲ್ಲ. ತಮ್ಮ ಪುತ್ರನಿಗೆ ಶಿಕಾರಿಪುರದಲ್ಲಿ ಟಿಕೆಟ್ ಸಿಗುವ ಆತಂಕ ಯಡಿಯೂರಪ್ಪ ಅವರಿಗೆ ಇದೆ.“ ಎಂದು ಬಾಬು ಹೇಳಿದ್ದಾರೆ.