ಸುಳ್ಯ: ವಾಹನ ಕಳವು ಆರೋಪದಲ್ಲಿ ಬಂಧಿತನಾಗಿ ಜಾಮೀನು ಪಡೆದ ಬಳಿಕ 4 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇರಳ ರಾಜ್ಯದ ಕಣ್ಣೂರಿನಲ್ಲಿ ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿ ಅಶ್ರಫ್ ರಿಫ್ವಾನ್ ಬಂಧಿತ ಆರೋಪಿ.
ಸುಳ್ಯ ಪೊಲೀಸರು ಅಶ್ರಫ್ ರಿಫ್ವಾನ್ ನನ್ನು 2019ರಲ್ಲಿ ಕಾರು ಹಾಗೂ ಬೈಕ್ ಗಳ ಕಳವು ಪ್ರಕರಣದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಆತ ಜಾಮೀನು ಪಡೆದು ಹೊರಬಂದಿದ್ದ. ಆದರೆ ಆ ಬಳಿಕ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೆ ಕೇರಳಕ್ಕೆ ಹೋಗಿ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಆರೋಪಿಗೆ ಹಲವಾರು ಬಾರಿ ವಾರೆಂಟ್ ಹೊರಡಿಸಿತ್ತು. ಆದರೆ ಈತ ನಾಪತ್ತೆಯಾಗಿದ್ದ. ಇದೀಗ ಸುಳ್ಯ ಪೊಲೀಸರು ಆರೋಪಿಯನ್ನು ಕೇರಳದ ಕಣ್ಣೂರಿನಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.