ಪಾಗಲ್ ಪ್ರೇಮಿಯ ಕ್ರೌರ್ಯಕ್ಕೆ ಯುವತಿ ಬಲಿ: 16ಬಾರಿ ಇರಿದು ಕೊಲೆಗೈದ ಹಂತಕ


ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು 16 ಬಾರಿ ಇರಿದು ಹತ್ಯೆಗೈದಿದ್ದಾನೆ. ಯುವತಿ ಎದೆ, ಹೊಟ್ಟೆ, ಕುತ್ತಿಗೆಯ ಭಾಗದಲ್ಲಿ ಆಗಿರುವ ಗಂಭೀರ ಗಾಯದಿಂದ ಮೃತಪಟ್ಟಿದ್ದಾಳೆ. 

ಬೆಂಗಳೂರಿನ ಮುರುಗೇಶ್‌ಪಾಳ್ಯದಲ್ಲಿ ಈ ಪ್ರಕರಣ ನಡೆದಿದೆ. ಲೀಲಾ ಪವಿತ್ರ (26) ಎಂಬಾಕೆಯೇ ಕೊಲೆಯಾದ ಯುವತಿ. ಈಕೆಯನ್ನು ಪ್ರೀತಿ ಮಾಡುತ್ತಿದ್ದ ದಿವಾಕರ್ ಎಂಬಾತ ಹಂತಕ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಲೀಲಾ ಪವಿತ್ರ ಆಂಧ್ರಪ್ರದೇಶ ಮೂಲದ ಒಮೆಗಾ ಎನ್ನುವ ಮೆಡಿಸನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ಕೆಲಸ ಮುಗಿಸಿ ಮನೆಯತ್ತ ಹೋಗುತ್ತಿದ್ದ ವೇಳೆ ಆರೋಪಿ ಮುರಗೇಶ್ ಪಾಳ್ಯದ ಎನ್ಎಲ್ ರಸ್ತೆಯಲ್ಲಿ ಆಕೆಯನ್ನು ಕೊಲೆ ಮಾಡಿದ್ದಾನೆ. ಎದೆ, ಹೊಟ್ಟೆ ಹಾಗೂ ಕುತ್ತಿಗೆ ಭಾಗಕ್ಕೆ ಒಟ್ಟು ಸುಮಾರು 16 ಸಲ ಇರಿದು ಕೊಲೆ ಮಾಡಿರುವ ಆರೋಪಿ ಈಗ ಪೊಲೀಸರ ವಶದಲ್ಲಿದ್ದಾನೆ. ಜೀವನ್‌ಬಿಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಇಬ್ಬರೂ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಅಂತರ್ಜಾತಿಯ ವಿವಾಹಕ್ಕೆ ಯುವತಿಯ ಮನೆಯವರ ವಿರೋಧವಿತ್ತು. ಅದೇ ಕಾರಣಕ್ಕೆ ಯುವತಿ ಯುವಕನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಬೇಸತ್ತ ಯುವಕ ಈ ಕೃತ್ಯ ಎಸಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
BREAKING NEWS
Loading latest news...
Join our WhatsApp Channel Powered By : Online Pudu