ಹೈದರಾಬಾದ್:
ತೆಲಂಗಾಣದ ವನಪರ್ತಿಯ ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಸ್ಟೆಲ್‌ನಲ್ಲಿ ರಾತ್ರಿ ನೀಡಲಾದ ಚಿಕನ್ ಊಟ ಸೇವಿಸಿದ ಕನಿಷ್ಠ 50 ವಿದ್ಯಾರ್ಥಿನಿಯರು ದಿಢೀರ್ ಅಸ್ವಸ್ಥಗೊಂಡ ಘಟನೆ ಅಕ್ಟೋಬರ್ 8ರಂದು ಸಂಭವಿಸಿದೆ. ಆಹಾರ ಸೇವನೆಯ ಬಳಿಕ ತೀವ್ರ ವಾಕರಿಕೆ, ಹೊಟ್ಟೆನೋವು ಹಾಗೂ ಜ್ವರ ಕಾಣಿಸಿಕೊಂಡಿದ್ದು, ಆಹಾರ ವಿಷಪೂರಿತಗೊಂಡಿರುವ (ಫುಡ್ ಪಾಯಿಸನಿಂಗ್) ಅನುಮಾನ ದಟ್ಟವಾಗಿದೆ.
ಪೆಬ್ಬೇರು ಪಟ್ಟಣದ ಹೊರವಲಯದಲ್ಲಿರುವ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ಗುಟ್ಟಾಗಿ ಆಸ್ಪತ್ರೆಗೆ ದಾಖಲಿಸಲು ಯತ್ನ – ಆಡಳಿತ ಮಂಡಳಿ ವಿರುದ್ಧ ಆಕ್ರೋಶ:
ಗುರುವಾರ ರಾತ್ರಿ ಊಟದ ಬಳಿಕ ವಿದ್ಯಾರ್ಥಿನಿಯರು ಒಬ್ಬೊಬ್ಬರಾಗಿಯೇ ತೀವ್ರ ವಾಕರಿಕೆ ಮತ್ತು ಅಸ್ವಸ್ಥತೆ ಅನುಭವಿಸಲು ಆರಂಭಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಹಾಸ್ಟೆಲ್ ವಾರ್ಡನ್ ಪತಿ, ಪೋಷಕರಿಗಾಗಲಿ ಅಥವಾ ಸಂಬಂಧಪಟ್ಟ ಹಿರಿಯ ಶಿಕ್ಷಣಾಧಿಕಾರಿಗಳಿಗಾಗಲಿ ಯಾವುದೇ ಮಾಹಿತಿ ನೀಡದೆ ಕೆಲ ವಿದ್ಯಾರ್ಥಿನಿಯರನ್ನು ಪೆಬ್ಬೇರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (PHC) ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆಯ ಕುರಿತು ಪ್ರಶ್ನಿಸಿದಾಗ, ಕಾಲೇಜು ಸಿಬ್ಬಂದಿ ಆಹಾರದಲ್ಲಿ ಯಾವುದೇ ದೋಷವಿಲ್ಲವೆಂದು ಸಮರ್ಥಿಸಿಕೊಂಡಿದ್ದು, ವಿದ್ಯಾರ್ಥಿನಿಯರು ಕೇವಲ ಸಾಮಾನ್ಯ ವೈರಲ್ ಜ್ವರದಿಂದ ಬಳಲುತ್ತಿದ್ದಾರೆ ಎಂದು ನೆಪ ಹೇಳಿ ಮುಚ್ಚಿಹಾಕಲು ಯತ್ನಿಸಿದ್ದಾರೆ.
‘ರಾತ್ರಿ ಊಟದ ಬಳಿಕವೇ ಆರೋಗ್ಯ ಹದಗೆಟ್ಟಿತು’: ವಿದ್ಯಾರ್ಥಿನಿಯರ ಹೇಳಿಕೆ:
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ವಿಡಿಯೋ ಮೂಲಕ ವಾಸ್ತವ ಬಿಚ್ಚಿಟ್ಟಿದ್ದು, "ರಾತ್ರಿ ಊಟ ಮುಗಿಸಿದ ನಂತರ ನಮಗೆ ಜ್ವರದ ಅನುಭವವಾಯಿತು. ಮಾತ್ರೆ ತೆಗೆದುಕೊಂಡು ಮಲಗಿದರೂ ಆರೋಗ್ಯ ಸುಧಾರಿಸಲಿಲ್ಲ, ತೀವ್ರ ಅಸ್ವಸ್ಥತೆ ಉಂಟಾಯಿತು. ಹಾಸ್ಟೆಲ್‌ನ ಬಹುಪಾಲು ವಿದ್ಯಾರ್ಥಿನಿಯರಿಗೂ ಇದೇ ರೀತಿ ಆಗಿದ್ದು, ಬೆಳಿಗ್ಗೆ ನಮ್ಮನ್ನು ಆಸ್ಪತ್ರೆಗೆ ಕರೆತರಲಾಯಿತು" ಎಂದು ಹೇಳಿದ್ದಾರೆ.
ಇದರ ನಡುವೆ, ಕಾಲೇಜು ಆಡಳಿತ ಮಂಡಳಿಯು ಅಕ್ಟೋಬರ್ 7ರಂದೇ ಹಾಸ್ಟೆಲ್‌ನಲ್ಲಿ ಆರೋಗ್ಯ ಶಿಬಿರ ನಡೆಸಿ 22 ವಿದ್ಯಾರ್ಥಿನಿಯರಿಗೆ ವೈರಲ್ ಜ್ವರ ಇರುವುದನ್ನು ಪತ್ತೆಹಚ್ಚಲಾಗಿತ್ತು ಎಂದು ವಾದಿಸಿದೆ. ಆದರೆ ಸ್ವತಃ ಕಾಲೇಜಿನ ಪ್ರಾಂಶುಪಾಲರೇ ತಮಗೆ ಅಂತಹ ಯಾವುದೇ ಹೆಲ್ತ್ ಕ್ಯಾಂಪ್ ಬಗ್ಗೆ ಮಾಹಿತಿಯೇ ಇಲ್ಲ ಎಂದು ಹೇಳಿಕೆ ನೀಡಿರುವುದು ಸಿಬ್ಬಂದಿಯ ಕಳ್ಳಾಟಕ್ಕೆ ಸಾಕ್ಷಿಯಾಗಿದೆ.
ಸ್ಥಳಕ್ಕೆ ಜನಪ್ರತಿನಿಧಿಗಳ ದೌಡು:
ವಿಷಯ ತಿಳಿಯುತ್ತಿದ್ದಂತೆ ಪೆಬ್ಬೇರು ಪುರಸಭೆ ಅಧ್ಯಕ್ಷ ಶ್ರೀನಿವಾಸ್ ಗೌಡ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಯೋಗಕ್ಷೇಮ ವಿಚಾರಿಸಿದ್ದಾರೆ. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ಆರೋಗ್ಯದ ಜತೆ ಚೆಲ್ಲಾಟವಾಡಿ, ವಿಷಯ ಮುಚ್ಚಿಡಲು ಯತ್ನಿಸಿದ ಸಿಬ್ಬಂದಿ ವಿರುದ್ಧ ಕಠಿಣ ತನಿಖೆ ನಡೆಸಿ ಶಿಸ್ತುಕ್ರಮ ಜರುಗಿಸಬೇಕು ಎಂದು ಪೋಷಕರು ಪಟ್ಟುಹಿಡಿದಿದ್ದಾರೆ.
