ಪತಿ, ಅತ್ತೆಯನ್ನು ಕೊಲೆಗೈದು ಮೃತದೇಹವನ್ನು ಫ್ರಿಡ್ಜ್ ನಲ್ಲಿರಿಸಿ ಪಕ್ಕದ ರಾಜ್ಯದಲ್ಲಿ ಎಸೆದ ಮಹಿಳೆ ಅರೆಸ್ಟ್



ಗುವಾಹಟಿ: ಮಹಿಳೆಯೊಬ್ಬಳು ತನ್ನ ಪತಿ ಹಾಗೂ ಅತ್ತೆಯನ್ನು ಕೊಲೆಗೈದು, ಅವರ ಮೃತದೇಹಗಳನ್ನು ತುಂಡರಿಸಿ ಫ್ರಿಡ್ಜ್ ನಲ್ಲಿಟ್ಟು ಅವುಗಳನ್ನು ಪಕ್ಕದ ರಾಜ್ಯದಲ್ಲಿ ಎಸೆದ ಆತಂಕಕಾರಿ ಘಟನೆಯೊಂದು ಅಸ್ಸಾಂ ರಾಜ್ಯದ ಗುವಾಹಟಿಯ ನ್ಯೂನ್ಮತಿಯಲ್ಲಿ ನಡೆದಿದೆ. ಈ ದುಷ್ಕೃತ್ಯಕ್ಕೆ ಈಕೆಯ ಗೆಳೆಯರಾದ ಟ್ಯಾಕ್ಸಿ ಡ್ರೈವರ್, ತರಕಾರಿ ವ್ಯಾಪಾರಿ ಸಹಾಯ ಮಾಡಿದ್ದು, ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.

ಜಿಮ್ ಇನ್‌ಸ್ಟ್ರಕ್ಟರ್ ಆಗಿರುವ ಬಂಧನಾ ಕಲಿತಾ (32), ಟ್ಯಾಕ್ಸಿ ಡ್ರೈವರ್ ಧಂತಿ ದೇಕಾ, ತರಕಾರಿ ವ್ಯಾಪಾರಿ ಅರುಪ್ ದೇಕಾ ಬಂಧಿತ ಆರೋಪಿಗಳು. 

               ಶಂಕರಿ ಡೇ ಹಾಗೂ ಅಮರ್‌ಜ್ಯೋತಿ 

ಬಂಧನಾ ಕಲಿತ ಪತಿ ಅಮರ್‌ಜ್ಯೋತಿ (35) ಹಾಗೂ ಅತ್ತೆ ನಿವೃತ್ತ ಉದ್ಯೋಗಿ ಶಂಕರಿ ಡೇ (62) ಕೊಲೆಯಾದ ದುರ್ದೈವಿಗಳು. ಈಕೆ ಕಳೆದ ಜುಲೈ 26ರಂದು ಅತ್ತೆಯನ್ನು, ಆ.17ರಂದು ಪತಿಯನ್ನು ಕೊಲೆಗೈದಿದ್ದಳು. ಕೊಲೆ ಕೃತ್ಯದ ಬಳಿಕ ಮೃತದೇಹಗಳನ್ನು ತುಂಡರಿಸಿ ಅದನ್ನು ಎಸೆಯಲೆಂದೇ ಎರಡು ಸಲ ಪಕ್ಕದ ಮೇಘಾಲಯಕ್ಕೆ ಹೋಗಿ ಬಂದಿದ್ದರು.

ಇಷ್ಟೆಲ್ಲಾ ಆದ ಮೇಲೆ ಬಂಧನಾ ಕಲಿತಾ ಕಳೆದ ಆ. 19ರಂದು ಪತಿ ಹಾಗೂ ಅತ್ತೆ ಕಾಣಿಸುತ್ತಿಲ್ಲ ಎಂದು ನ್ಯೂನ್ಮತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪರಿಣಾಮ ತನಿಖೆಗಿಳಿದ ಪೊಲೀಸರಿಗೆ ಯಾವುದೇ ಸುಳಿವು ದೊರಕಿರಲಿಲ್ಲ. ಆದರೆ ನ. 21ರಂದು ಕೊಲೆಯಾದ ಶಂಕರಿ ಡೇ ಸಂಬಂಧಿ ನಿರ್ಮಲಾ ಡೇ ಎಂಬವರು ನಾಪತ್ತೆಯಾದ ಇಬ್ಬರ ಖಾತೆಯಿಂದ ಎಟಿಎಂ ಮೂಲಕ ಹಣ ಡ್ರಾ ಆಗಿರುವುದನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಆಕೆ ಅವರಿಬ್ಬರೂ ಅಪಹರಣ ಆಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರು.


ಫೆ.14ರಂದು ಮತ್ತೆ ಪೊಲೀಸ್ ಠಾಣೆಗೆ ಬಂದಿದ್ದ ಬಂಧನಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಅದೇ ದಿನ ನಿರ್ಮಲಾ ಡೇ ಕೂಡ ಠಾಣೆಗೆ ಬಂದು ತನಿಖೆಯಲ್ಲಿ ಪ್ರಗತಿ ಆಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಪರಿಣಾಮ ವಿಶೇಷ ತಂಡ ರಚಿಸಲಾಗಿದ್ದು, ಪೊಲೀಸರು ಬಂಧನಾ ಮತ್ತು ನಿರ್ಮಲಾ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಬಂಧನಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಪೊಲೀಸರು ಮತ್ತಷ್ಟು ಸೂಕ್ಷ್ಮವಾಗಿ ವಿಚಾರಣೆ ನಡೆಸಿದಾಗ ಇಬ್ಬರನ್ನೂ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ಅತ್ತೆಯನ್ನು ಉಸಿರು ಕಟ್ಟಿಸಿ ಸಾಯಿಸಿದ ಬಳಿಕ ರುಂಡ ಕತ್ತರಿಸಿ ದೇಹವನ್ನು ಮೂರು ತುಂಡಾಗಿಸಿದ್ದರು. ಪತಿಯನ್ನು ತಲೆಗೆ ಸರಳಿನಿಂದ ಹೊಡೆದು ಕೊಂದು ಬಳಿಕ ದೇಹವನ್ನು ಐದು ಭಾಗಗಳಾಗಿ ಕತ್ತರಿಸಿದ್ದರು. ದೇಹದ ಭಾಗಗಳನ್ನು ಪ್ಯಾಕ್ ಮಾಡಿ ಟ್ಯಾಕ್ಸಿಯಲ್ಲಿ ಮೇಘಾಲಯಕ್ಕೆ ಕೊಂಡೊಯ್ದು ಬೇರೆ ಬೇರೆ ಪ್ರದೇಶದಲ್ಲಿ ಎಸೆದಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ.

ಬಂಧನಾ-ಅಮರಜ್ಯೋತಿ ಮನೆಯವರ ವಿರೋಧದ ನಡುವೆಯೂ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಕೆಲವು ವರ್ಷಗಳ ಬಳಿಕ ಶಂಕರಿ ಆಕೆಯನ್ನು ಸೊಸೆ ಎಂದು ಒಪ್ಪಿ ಮೂವರೂ ಒಂದೇ ಮನೆಯಲ್ಲಿ ವಾಸವಿದ್ದರು. ಆದರೆ ಇತ್ತೀಚೆಗೆ ಅಮರಜ್ಯೋತಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಗಲಾಟೆಯಾಗಿ ಶಂಕರಿ ಬೇರೆಡೆ ತನ್ನ ಸ್ವಂತ ಫ್ಲ್ಯಾಟ್‌ನಲ್ಲಿ ಇರಲಾರಂಭಿಸಿದ್ದರು. ಆ ಬಳಿಕ ಈ ಕೃತ್ಯವಾಗಿದ್ದು, ಕೊಲೆಗೆ ಬಂಧನಾ ಕಲಿತಾ ಅಕ್ರಮ ಸಂಬಂಧವೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ನಿಖರ ಕಾರಣ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.