ಇಡುಕ್ಕಿ: ಪರೋಟ ತಿಂದು ಫುಡ್ ಅಲರ್ಜಿ ಉಂಟಾಗಿ ಪಿಯು ವಿದ್ಯಾರ್ಥಿನಿಯೋರ್ವಳು ಮೃತಪಟ್ಟಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೋಡಪುಳದಲ್ಲಿ ನಡೆದಿದೆ.
ತೋಡಪುಳ ಸಮೀಪದ ವಾಜತೊಪ್ಪುವಿನ ನಿವಾಸಿ ನಯನ ಮರಿಯಾ (16) ಮೃತ ವಿದ್ಯಾರ್ಥಿನಿ. ಈಕೆ ವಾಜತೊಪ್ಪುವಿನ ಸೈಂಟ್ ಜಾರ್ಜ್ ಹೈಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಪರೋಟ ತಿಂದ ಬಳಿಕ ನಯನ ಮರಿಯಾಗೆ ಫುಡ್ ಪಾಯಿಸನ್ ಆಗಿದೆ. ಆದ್ದರಿಂದ ಆಕೆ ಇಡುಕ್ಕಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.
ಮೈದಾ ಹಾಗೂ ಗೋಧಿಯಿಂದ ಮಾಡಿರುವ ಆಹಾರಗಳನ್ನು ಸೇವಿಸಿದಾಗ ನಯನಾ ಮರಿಯಾ ಅಲರ್ಜಿಗೆ ಒಳಗಾಗುತ್ತಿದ್ದಳು. ಆದರೂ, ತುಂಬಾ ದಿನಗಳ ಬಳಿಕ ಇತ್ತೀಚೆಗಷ್ಟೇ ಮತ್ತೆ ಮೈದಾ ಅಥವಾ ಗೋಧಿಯಿಂದ ಮಾಡಿದ ಆಹಾರವನ್ನು ಸೇವಿಸಿದ್ದಳು. ಆದರೂ ಆಕೆಗೆ ಏನೂ ಆಗಿರಲಿಲ್ಲ.
ಏನೂ ಆಗಲಿಲ್ಲ ಎಂಬ ನಂಬಿಕೆಯಿಂದಲೇ ಇದೀಗ ಮತ್ತೆ ನಯನಾ ಮೈದಾದಿಂದ ಮಾಡಿರುವ ಪರೋಟವನ್ನು ತಿಂದಿದ್ದಳು. ಪರಿಣಾಮ ಅನಾರೋಗ್ಯದಿಂದ ಬಳಲಿದ ನಯನಾ ಮರಿಯಾಳನ್ನು ಇಡುಕ್ಕಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಫೆ. 10ರಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾಳೆ.