ಶಾಸಕ ವೇದವ್ಯಾಸ ಕಾಮತರ ಅಭಿನಂದನಾ ಪ್ರಚಾರ ಫ್ಲೆಕ್ಸ್ ಗಳನ್ನು ಕೂಡಲೇ ತೆರವುಗೊಳಿಸಿ- CPM




ಮಂಗಳೂರು ನಗರದಾದ್ಯಂತ ಸರಕಾರಿ ಅನುದಾನದ ಕಾಮಗಾರಿಗಳಿಗೆ, ಆಟೊ ರಿಕ್ಷಾ ನಿಲ್ದಾಣಗಳಿಗೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತರ ಅಭಿನಂಧನಾ ಪ್ರಚಾರ ಪ್ಲೆಕ್ಸ್ ,ಬ್ಯಾನರ್ ಗಳನ್ನು ಅಳವಡಿಸಿರುವುದು ನಿಯಮಬಾಹಿರವಾಗಿದ್ದು ಇಂತಹ ಅನಧಿಕೃತ ಫ್ಲೆಕ್ಸ್ , ಬ್ಯಾನರ್ ಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯು ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದೆ.

ಮಂಗಳೂರು ನಗರದಾದ್ಯಂತ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ, ಆಟೋ ರಿಕ್ಷಾ ನಿಲ್ದಾಣಗಳಿಗೆ ಶಾಸಕ ವೇದವ್ಯಾಸ ಕಾಮತರ ಮತ್ತು ಸ್ಥಳೀಯ ಜನಪ್ರತಿನಿಧಿ ಕಾರ್ಪೊರೇಟರ್ ಗಳ ಪೋಟೋಗಳುಳ್ಳ ಅನಧಿಕೃತ ಪ್ರಚಾರ ಫ್ಲೆಕ್ಸ್ ಮತ್ತು ಬ್ಯಾನರ್ ಗಳು ರಾರಾಜಿಸುತ್ತಿವೆ. 

ಜನರ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಿಂದ ನಡೆಯುವ ಸರಕಾರಿ ಅನುದಾನದ ಕಾಮಗಾರಿಗಳಿಗೆ ತಮ್ಮದೇ ಕೊಡುಗೆ ಅನ್ನುವ ರೀತಿಯಲ್ಲಿ ಪುಕ್ಸಟೆ ಪ್ರಚಾರಗಿಟ್ಟಿಸುವ ಶಾಸಕ ವೇದವ್ಯಾಸ ಕಾಮತರ ರಾಜಕೀಯ ನಡೆ ಅತ್ಯಂತ ಕೀಳುಮಟ್ಟದ್ದಾಗಿದೆ. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಲ್ಲಿ ನಡೆಯುವ ಭ್ರಷ್ಟಾಚಾರದಲ್ಲಿ ಶಾಸಕ ಕಾಮತರ ಪಾತ್ರ ದೊಡ್ಡದಿದೆ ಎಂಬ ಆರೋಪಗಳು ಜನಸಾಮಾನ್ಯರ ನಡುವೆ ಕೇಳಿಬರುತ್ತಿದ್ದು, ಶಾಸಕರಾಗಿ ಆಯ್ಕೆಯಾಗಿರುವ ವೇದವ್ಯಾಸ ಕಾಮತರು ಜನರ ಬದುಕಿಗೆ ಸಂಬಂಧಿಸಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಲ್ಲಿ ಅಥವಾ ಯೋಜನೆಗಳನ್ನು ರೂಪಿಸುವಲ್ಲಿ ಒಂದೇ ಒಂದು ಪ್ರಶ್ನೆಯನ್ನು ವಿಧಾನಸೌಧದಲ್ಲಿ ಈವರೆಗೂ ಎತ್ತಲೇ ಇಲ್ಲ. ಕೇವಲ ಇಲ್ಲಿನ ಸಣ್ಣ ಪುಟ್ಟ ರಸ್ತೆ, ಚರಂಡಿ ಕಾಮಗಾರಿಗಳ ಗುದ್ದಲಿ ಪೂಜೆಗೆ, ಉದ್ಘಾಟನೆಗಳಿಗೆ ತೆರಳಿದ ಫೋಟೋಗಳನ್ನು ತಮ್ಮ ಹಿಂಬಾಲಕರ ಮೂಲಕ ಅಲ್ಲಲ್ಲಿ ಅನಧಿಕೃತ (ಮ.ನ.ಪಾದ ಅನುಮತಿ ಪಡೆಯದೆ) ಬ್ಯಾನರ್, ಫ್ಲೆಕ್ಸ್ ಗಳನ್ನು ಅಳಪಡಿಸುತ್ತಿರುವ ಕಾಯಕದಲ್ಲೇ ತೊಡಗಿಸಿಕೊಂಡು ತಿರುಗಾಡುತ್ತಿರುವುದು ಬಹಳ ಖೇದಕರ. 

ಈಗಾಗಲೇ ಮಾನ್ಯ ಕರ್ನಾಟಕ ಹೈಕೋರ್ಟ್ ಸೂಚನೆಯನ್ನು ನೀಡಿದ್ದು ಆ ಪ್ರಕಾರ ಸರಕಾರಿ ವೆಚ್ಚದಲ್ಲಿ ಕೈಗೊಳ್ಳುವ ಯಾವುದೇ ಯೋಜನೆಗಳಲ್ಲಿ ಜನಪ್ರತಿನಿಧಿಗಳ ಫೋಟೋ ಹಾಕಿದ ಫ್ಲೆಕ್ಸ್ ಗಳು, ಅಭಿನಂಧನಾ ಬ್ಯಾನರ್ ಗಳು ಕಂಡುಬಂದಲ್ಲಿ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು ಅಥವಾ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ತಿಳಿಸಿದೆ. ಹೀಗಿದ್ದು ಮಾನ್ಯ ಕರ್ನಾಟಕ ಹೈಕೋರ್ಟ್ ಆಜ್ಞೆಯನ್ನು ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಪಾಲಿಸದೆ ಇರೋದು ನ್ಯಾಯಾಲಯಕ್ಕೆ ಎಸಗಿದ ಅವಮಾನ. 

ಈ ಹಿನ್ನಲೆಯಲ್ಲಿ ಸರಕಾರಿ ಅನುದಾನ ಕಾಮಗಾರಿಗಳಿಗೆ ಅಳವಡಿಸಿರುವ ಶಾಸಕ ವೇದವ್ಯಾಸ ಕಾಮತರ ಅಭಿನಂದನಾ ಪ್ರಚಾರ ಫ್ಲೆಕ್ಸ್, ಬ್ಯಾನರ್ ಗಳನ್ನು ಈ ಕೂಡಲೇ ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತರನ್ನು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಒತ್ತಾಯಿಸಿದೆ ಎಂದು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
BREAKING NEWS
Loading latest news...
Join our WhatsApp Channel Powered By : Online Pudu