-->
ಪುನರ್ಜನ್ಮ: ಬದುಕನ್ನು ಬದಲಾಯಿಸುವ ಕುಟುಂಬ ಸಮ್ಮಿಲನ

ಪುನರ್ಜನ್ಮ: ಬದುಕನ್ನು ಬದಲಾಯಿಸುವ ಕುಟುಂಬ ಸಮ್ಮಿಲನ

ಪುನರ್ಜನ್ಮ: ಬದುಕನ್ನು ಬದಲಾಯಿಸುವ ಕುಟುಂಬ ಸಮ್ಮಿಲನ





ಮದ್ಯ ವ್ಯಸನಕ್ಕೆ ತುತ್ತಾಗಿ ಬದುಕೇ ಮುಗಿದುಹೋಯಿತು ಎಂಬ ಹಾಗೆ ಇದ್ದವರಿಗೆ ‘ಪುನರ್ಜನ್ಮ’ ಹೊಸ ಬದುಕು ಕಟ್ಟಿಕೊಡಲು ಹಾಗು ಸಮಾಜದ ಮುಖ್ಯ ವಾಹಿನಿಗೆ ತಲುಪಲು ಸಹಾಯ ಹಸ್ತ ನೀಡುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.



ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜು, ಮಿಜಾರು ಇಲ್ಲಿನ ಸಭಾಂಗಣದಲ್ಲಿ ನಡೆದ 'ಆಳ್ವಾಸ್' ಪುನರ್ಜನ್ಮದ 3ನೇ ವರ್ಷದ ವಾರ್ಷಿಕೋತ್ಸವ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಢುತ್ತಿದ್ದರು.



ಮದ್ಯವ್ಯಸನಿಗಳು ಯಾರೂ ಹುಟ್ಟುತ್ತಾ ಕೆಟ್ಟವರಾಗಿರುವುದಿಲ್ಲ. ಆದರೆ, ಬೆಳೆಯುತ್ತಾ ನಮಗೆ ಲಭಿಸುವ ಪರಿಸರದ ವಾತಾವರಣ ಮತ್ತು ಸಹವಾಸ ವ್ಯಕ್ತಿಯನ್ನು ಬದಲಾಯಿಸುತ್ತದೆ ಎಂದು ಹೇಳಿದರು.



ಮನುಷ್ಯನ ಜೀವನದಲ್ಲಿ ತಪ್ಪು ಮಾಡುವುದು ಸಹಜ, ಆದರೆ ತಾವು ಮಾಢಿದ ತಪ್ಪನ್ನು ಮುಂದುವರಿಸುವುದು ಸರಿಯಲ್ಲ. ಆ ತಪ್ಪುಗಳನ್ನು ತಿದ್ದಿಕೊಂಡು ಜೀವನದಲ್ಲಿ ಸರಿಯಾದ ದಾರಿಯಲ್ಲಿ ಮುನ್ನಡೆಯಬೇಕು. ನಮ್ಮ ನಡೆ-ನುಡಿ, ಆಚಾರ-ವಿಚಾರಗಳಿಂದ ಬದುಕನ್ನು ಬದಲಾಯಿಸಲು ಸಾಧ್ಯ. ಬದುಕು ಅಮೂಲ್ಯವಾದದ್ದು... ಅದನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬೇಕು. ಮಾದಕ ವ್ಯಸನಿಗಳು ಮೂಲತಃ ಯಾರೂ ಕೆಟ್ಟವರಲ್ಲ. ಎಲ್ಲವೂ ಒಂದು ಪರಿಸ್ಥಿತಿಯ ಸಮಯದಲ್ಲಿ ತಮ್ಮ ಮನಸ್ಸನ್ನು ವಿಚಲಿತವಾಗಿಡದೆ ತಮ್ಮನ್ನು ತಾವು ನಿಯಂತ್ರಿಸಿಕೊಂಡು ಮುನ್ನಡೆಯಬೇಕು. ಇದರ ಜೊತೆಗೆ ಕೆಟ್ಟ ಹವ್ಯಾಸವನ್ನು ಬದಲಾಯಿಸಿದರೆ ಪ್ರತಿಯೊಬ್ಬರ ಜೀವನವೂ ಉಜ್ವಲವಾಗುತ್ತದೆ ಎಂದರು.



ಆಳ್ವಾಸ್ ಹೆಲ್ತ್ ಸೆಂಟರ್ ನಿರ್ದೇಶಕ ಡಾ. ವಿನಯ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಮಾದಕ ಪದಾರ್ಥ ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿ. ಮನುಷ್ಯ ಅಂತಹ ವಸ್ತುಗಳಿಂದ ದೂರವಿರಬೇಕು. ನಮಗಿರುವುದೊಂದೇ ಜೀವನ. ಅದನ್ನು ಸರಿಯಾಗಿ ನಿರ್ವಹಿಸಬೇಕು. ನಮ್ಮ ಬದುಕನ್ನು ನಾವೇ ತಿದ್ದಿ ಸರಿಪಡಿಸಬೇಕು. ಮತ್ತು ಈ ವಿಷಯದಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಮನಸ್ಸಿದ್ದರೆ ಮಾರ್ಗವಿದೆ ಮತ್ತು ಏನನ್ನಾದರೂ ಸಾಧಿಸಬಹುದು ಎಂದರು.



ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ‘ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ’ ಟ್ರಸ್ಟ್ ನ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಇಂದಿನ ಜನಾಂಗವು ಅಧಿಕ ಪ್ರಮಾಣದಲ್ಲಿ ವ್ಯಸನಿಗಳಾಗಿದ್ದಾರೆ, ಈ ದುಶ್ಚಟದಿಂದ ಅದೆಷ್ಟೋ ಕುಟುಂಬ ನರಳುತ್ತಿದೆ, ಯುವಕರು ಮದ್ಯಪಾನಕ್ಕೆ ಹಾಗು ಅಮಲು ಪದಾರ್ಥಗಳಿಗೆ ಒಳಗಾಗುತ್ತಿದ್ದಾರೆ. ಛಲ, ಆತ್ಮವಿಶ್ವಾಸದಿಂದ ಬದುಕನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳಬೇಕು ಎಂದರು.



ಕಾರ್ಯಕ್ರಮದಲ್ಲಿ ಸಂಪನ್ಮೂಲಗಳ ವ್ಯಕ್ತಿಯಾಗಿ ಭಾಗವಹಿಸಿದ ಇನ್ನೊರ್ವ ಅತಿಥಿ ಉಡುಪಿಯ ಡಾ. ಪಿ. ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ. ಪಿ.ವಿ ಭಂಡಾರಿ ಮಾತನಾಡಿ ‘ವ್ಯಸನ ಎಂಬುದು ವ್ಯಕ್ತಿಯನ್ನು ಹಾಳು ಮಾಡುವುದರ ಜೊತೆಗೆ ಕುಟುಂಬದ ನೆಮ್ಮದಿಯನ್ನು ಕೆಡವುತ್ತದೆ. ಕುಡಿತ ಎಂಬುವುದು ಒಂದು ರೀತಿಯ ಮನೋರೋಗ ಅದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯ ಎಂದರು .



ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರ್ಯನ್ ಸ್ವಾಗತಿಸಿದರು, ಆಳ್ವಾಸ್ ವಿದ್ಯಾರ್ಥಿನಿ ಪವಿತ್ರಾ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಪುನರ್ಜನ್ಮ ದ ಆಪ್ತ ಸಮಾಲೋಚಕ ಲೋಹಿತ್. ಕೆ ವಂದಿಸಿದರು.

ಆಳ್ವಾಸ್ ಪದವಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಡಾ. ಮಧುಮಾಲ ಹಾಗು ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article