-->

ಪರೀಕ್ಷೆ ಬರೆಯಲು ಆಗಮಿಸಿದ್ದ ಬಾಣಂತಿಗೆ ನೆರವಾದ ಲೇಡಿ ಪೊಲೀಸ್: 4 ತಿಂಗಳ ಶಿಶುವಿನ ಆರೈಕೆಯೊಂದಿಗೆ ಎದೆಹಾಲುಣಿಸಿದ ಮಾತೃ ಹೃದಯಿ

ಪರೀಕ್ಷೆ ಬರೆಯಲು ಆಗಮಿಸಿದ್ದ ಬಾಣಂತಿಗೆ ನೆರವಾದ ಲೇಡಿ ಪೊಲೀಸ್: 4 ತಿಂಗಳ ಶಿಶುವಿನ ಆರೈಕೆಯೊಂದಿಗೆ ಎದೆಹಾಲುಣಿಸಿದ ಮಾತೃ ಹೃದಯಿ


ಭುವನೇಶ್ವರ್: ಪೊಲೀಸ್ ನೇಮಕಾತಿ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಹಿಳಾ ಕಾನ್ ಸ್ಟೇಬಲ್ ಒಬ್ಬರು ಪರೀಕ್ಷೆ ಬರೆಯಲೆಂದು ಬಂದಿದ್ದ ಬಾಣಂತಿಯ ನಾಲ್ಕು ತಿಂಗಳ ಹಸುಗೂಸನ್ನು ಪರೀಕ್ಷೆ ಮುಗಿಯುವವರೆಗೆ ನೋಡಿಕೊಂಡಿದ್ದಾರೆ. ಅಲ್ಲದೆ ಹೆತ್ತ ತಾಯಿಯಂತೆ ಎದೆಹಾಲು ಉಣಿಸಿ ಆರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಹಿಳಾ ಪೇದೆಯ ಈ ಕಾರ್ಯಕ್ಕೆ ಜನತೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಈ ವಿಶೇಷ ಕ್ಷಣಕ್ಕೆ ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಪರೀಕ್ಷಾ ಕೇಂದ್ರ ಸಾಕ್ಷಿಯಾಗಿದೆ. ಈ ಮಹಿಳಾ ಪೊಲೀಸ್ ಸಿಬ್ಬಂದಿಯ ಹೆಸರು ಬಸಂತಿ ಚೌಧರಿ. ಈಕೆಯನ್ನು ಭಾನುವಾರ ಮಲ್ಕಂಗಿರಿ ಕಾಲೇಜಿಗೆ ಪರೀಕ್ಷಾ ಕರ್ತವ್ಯಕ್ಕೆಂದು  ನಿಯೋಜಿಸಲಾಗಿತ್ತು. ಒಡಿಶಾ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಉದ್ಯೋಗಾಂಕ್ಷಿಗೆ ಎಲ್ಲ ಅಗತ್ಯ ನೆರವನ್ನು ನೀಡಿದ್ದು ಮಾತ್ರವಲ್ಲದೆ, ಆಕೆಯ ನಾಲ್ಕು ತಿಂಗಳ ಮಗುವನ್ನು ಹೆತ್ತ ತಾಯಿಯಂತೆ ನೋಡಿಕೊಳ್ಳುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.

ಚಂಚಲ ಮಲ್ಲಿಕ್ ಎಂಬಾಕೆ ತಮ್ಮ 4 ತಿಂಗಳ ಹೆಣ್ಣು ಮಗುವಿನೊಂದಿಗೆ ಪರೀಕ್ಷೆ ಬರೆಯಲು ಬಂದಿದ್ದರು. ಆದರೆ, ಆಕೆಯೊಂದಿಗೆ ಮಗು ನೋಡಿಕೊಳ್ಳಲೆಂದು ಕುಟುಂಬದ ಯಾರೊಬ್ಬರು ಬಂದಿರಲಿಲ್ಲ. ಆದ್ದರಿಂದ ಚಂಚಲ ಪರೀಕ್ಷಾ ಬರೆಯುವ ಭರವಸೆಯನ್ನೇ ಕಳೆದುಕೊಂಡಿದ್ದರು. ಈ ವೇಳೆ ಮಹಿಳಾ ಪೇದೆ ಬಸಂತಿಯವರು ಚಂಚಲಾ ಅವರ ಕಷ್ಟವನ್ನು ಆಲಿಸಿ, ಮಗುವನ್ನು ಪಡೆದುಕೊಂಡು ಆರೈಕೆ ಮಾಡಿದ್ದಾರೆ. ಈ ಮೂಲಕ ಚಂಚಲ ಆರಾಮವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟರು.

ಮಧ್ಯೆ ಮಧ್ಯೆ ಅಳುತ್ತಿದ್ದ ಮಗುವನ್ನು ಸಮಾಧಾನ ಮಾಡುತ್ತಿದ್ದ ಬಸಂತಿ, ಮಗುವಿಗೆ ತಮ್ಮ ಎದೆಹಾಲನ್ನು  ಉಣಿಸಲು ಕೂಡ ಹಿಂಜರಿಯಲಿಲ್ಲ. ಮಗು ಒಂದು ಗಂಟೆಗೂ ಅಧಿಕ ಕಾಲ ನನ್ನೊಂದಿಗೆ ಇತ್ತು. ಈ ಮಗು ಹಸಿದಾಗ ನಾನು ಹಾಲುಣಿಸಿದೆ. ಪರೀಕ್ಷೆ ಮುಗಿದ ಬಳಿಕ ಮಗುವನ್ನು ತಾಯಿಗೆ ಹಸ್ತಾಂತರಿಸಿದೆ ಎಂದು ಬಸಂತಿ ತಿಳಿಸಿದರು. ಬಸಂತಿ ಅವರ ಈ ಮಾನವೀಯ ಕಾರ್ಯವನ್ನು ಮಲ್ಕಂಗಿರಿ ಪೊಲೀಸ್ ಇಲಾಖೆ ಅಭಿನಂದಿಸಿದೆ.

Ads on article

Advertise in articles 1

advertising articles 2

Advertise under the article