ಉಪ್ಪಿನಂಗಡಿ: ಮೊಬೈಲ್ ಅಂಗಡಿಯಲ್ಲಿ ಅಕ್ರಮ ಮಾರಾಟದ 26 ಸಾವಿರ ಮೌಲ್ಯದ ಇ - ಸಿಗರೇಟ್ ವಶಕ್ಕೆ


ಉಪ್ಪಿನಂಗಡಿ: ಇಲ್ಲಿನ ಮೊಬೈಲ್‌ ಅಂಗಡಿಗೆ ದಾಳಿ ನಡೆಸಿದ ಪೊಲೀಸರು ಅನಧಿಕೃತವಾಗಿ ಮಾರಲಾಗುತ್ತಿದ್ದ ಇ- ಸಿಗರೇಟ್‌ ಅನ್ನು ವಶಪಡಿಸಿಕೊಂಡು, ಅಂಗಡಿ ಮಾಲಕನನ್ನು ಬಂಧಿಸಿರುವ ಘಟನೆ ನಡೆದಿದೆ.

ಪೊಲೀಸರು ಅಂಗಡಿ ಮಾಲಕ ನರಿಮೊಗರು ಗ್ರಾಮದ ಮುಕ್ವೆಯ ಶೇಖ್‌ ಶಾಹಿದ್‌ (27) ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಸುಮಾರು 26 ಸಾವಿರ ರೂ. ಮೌಲ್ಯದ ವಿವಿಧ ಫ್ಲೇವರ್ ನ ಒಟ್ಟು 52 ಇ- ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 

ಈ ಮೊಬೈಲ್ ಅಂಗಡಿಯು ಕಾಂಪ್ಲೆಕ್ಸ್‌ನ ಹಿಂಬದಿಯಲ್ಲಿ ಜನ ಓಡಾಟ ನಡೆಸದ ಸ್ಥಳದಲ್ಲಿದೆ. ಮೇಲ್ನೋಟಕ್ಕೆ ಇದೊಂದು ಮೊಬೈಲ್‌ ಮಾರಾಟ ಮಳಿಗೆಯಂತೆ ಕಾಣುತ್ತದೆ. ಆದರೆ ಮೊಬೈಲ್‌ ಮಾರಾಟದ ಪರವಾನಿಗೆಯನ್ನೂ ನವೀಕರಿಸಿರಲಿಲ್ಲ ಎಂಬ ಅಂಶ ತನಿಖೆ ವೇಳೆ ತಿಳಿದು ಬಂದಿದೆ. ಉಪ್ಪಿನಂಗಡಿಯಲ್ಲಿ ಕೆಲವೊಂದು ಅಂಗಡಿಗಳು ಪರವಾನಿಗೆಯನ್ನು ನವೀಕರಿಸದೇ ಅಕ್ರಮ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದು, ಗ್ರಾ.ಪಂ. ಈ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.