ಮಂಗಳೂರು : ಫುಡ್ ಪಾಯಿಸನ್ ನಿಂದ 231 ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ ; ಎಫ್ಐಆರ್ ದಾಖಲು


ಮಂಗಳೂರು: ನಗರದ ಹೊರವಲಯದ ಶಕ್ತಿನಗರದಲ್ಲಿರುವ ಸಿಟಿ ನರ್ಸಿಂಗ್ ಕಾಲೇಜು ಹಾಸ್ಟೆಲ್‌ನ 231ರಷ್ಟು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಕದ್ರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ನೀಡಿರುವ ದೂರಿನನ್ವಯ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಯಾವುದೋ ಸಂಶಯಾಸ್ಪದ ವಿಷಹಾರಿ ಆಹಾರವನ್ನು ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ನೀಡಲಾಗಿದ್ದು, ಆಹಾರ ತಯಾರಿಕೆ ಹಾಗೂ ಪೂರೈಕೆಯಲ್ಲಿ ಶುಚಿತ್ವ ಕಾಪಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಸೂಕ್ತ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ವರದಿ ಮಾಡದೆ ಲೋಪ ಎಸಗಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಆಹಾರ ಸುರಕ್ಷಿತಾಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿಗಳು ಜಂಟಿಯಾಗಿ ಹಾಸ್ಟೆಲ್ ನ ಆಹಾರ ತಯಾರಿಕಾ ಕೊಠಡಿಗೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ತಯಾರಿಸಿಟ್ಟಿರುವ ಆಹಾರ ಪದಾರ್ಥಗಳು, ಕುಡಿಯುವ ನೀರು, ಫ್ರಿಡ್ಜ್ ನಲ್ಲಿದ್ದ ಮಾಂಸ ಇನ್ನಿತರೆ ಆಹಾರ ವಸ್ತುಗಳನ್ನು ಅಧಿಕಾರಿಗಳ ತಂಡವು ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸುವ ವ್ಯವಸ್ಥೆ ಮಾಡಿದೆ. ಅಲ್ಲದೆ ತಕ್ಷಣದಿಂದ ಹಾಸ್ಟೆಲ್ ಅಡುಗೆ ಕೊಠಡಿಯಲ್ಲಿ ಯಾವುದೇ ಆಹಾರ ಪದಾರ್ಥಗಳನ್ನು ತಯಾರಿಸದಂತೆ ನಿರ್ಬಂಧ ವಿಧಿಸಿದೆ.


BREAKING NEWS
Loading latest news...
Join our WhatsApp Channel Powered By : Online Pudu