ಮೂವರು ಮಕ್ಕಳೊಂದಿಗೆ ಸಂಪ್ ಗೆ ಹಾರಿ ಪ್ರಾಣ ಬಿಟ್ಟ ಮಹಿಳೆ: ಕಾರಣ ಇದು...?
Sunday, January 29, 2023
ವಿಜಯಪುರ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ನೀರಿನ ಸಂಪ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಬಳಿಯ ವಿಠಲವಾಡಿ ತಾಂಡಾದಲ್ಲಿ ನಡೆದಿದೆ.
ಗೀತಾ ರಾಮು ಚೌವ್ಹಾಣ (32) ಮೃತ ಮಹಿಳೆ. ಆಕೆಯ ಮಕ್ಕಳಾದ ಸೃಷ್ಟಿ (6) ಸಮರ್ಥ (4) ಹಾಗೂ ಕಿಶನ್ (3) ದುರಂತದಲ್ಲಿ ಮೃತಪಟ್ಟವರು. ಪತಿ ರಾಮುವಿನೊಂದಿಗೆ ಗೀತಾ ಜಗಳವಾಡಿದ್ದರು. ಪರಿಣಾಮ ಬೇಸತ್ತ ಗೀತಾ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.
ಪತಿ ರಾಮು ಮಲಗಿದ್ದ ವೇಳೆ ಮೂವರು ಮಕ್ಕಳನ್ನು ನೀರಿನ ಸಂಪ್ ಗೆ ಎಸೆದ ಗೀತಾ, ಬಳಿಕ ತಾನೂ ಸಂಪ್ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.