ಹನಿಟ್ರ್ಯಾಪ್ ಮಾಡಲು ಪಾಕ್ ನಟಿಯರ ಬಳಕೆ?: ಪಾಕ್ ನಿವೃತ್ತ ಸೇನಾಧಿಕಾರಿಯಿಂದ ಸ್ಪೋಟಕ ವಿಚಾರ ಬಯಲು


ಇಸ್ಲಮಾಬಾದ್: ತಮ್ಮ ವಿರೋಧಿಗಳನ್ನು ಮೋಹದ ಜಾಲಕ್ಕೆ ಸಿಲುಕಿಸಿ ಮಹತ್ವದ ವಿಚಾರಗಳನ್ನು ಕಲೆ ಹಾಕಲು ಪಾಕಿಸ್ತಾನದ ಮಿಲಿಟರಿ ನಾಯಕತ್ವವು ಕೆಲವು ನಟಿಯರನ್ನು ಬಳಸಿಕೊಳ್ಳುತ್ತಿದೆ ಎಂದು ನಿವೃತ್ತ ಪಾಕ್ ಸೇನಾಧಿಕಾರಿ ಮೇಜರ್ ಆದಿಲ್ ರಾಜಾ ಇತ್ತೀಚೆಗೆ ಶಾಕಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಆದರೆ ಈ ನಿವೃತ್ತ ಮೇಜರ್, ಯಾರು ನಟಿಯರೆಂದು ಹೆಸರು ಬಹಿರಂಗಪಡಿಸಿಲ್ಲ. ಆದರೆ, ಸೋಲ್ಡರ್ ಸ್ಪೀಕ್ಸ್ ಹೆಸರಿನ ಯೂಟ್ಯೂಬ್‌ ಒಂದರಲ್ಲಿ ನಿವೃತ್ತ ಮೇಜರ್ ಆದಿಲ್ ರಾಜಾ ಕೆಲವು ಸುಳಿವುಗಳನ್ನು ನೀಡಿದ್ದಾರೆ. ಇದರ ಬೆನ್ನಲ್ಲೇ ಪಾಕ್ ನಟಿ ಸಾಜಲ್ ಅಲಿ ಪ್ರತಿಕ್ರಿಯೆ ನೀಡಿದ್ದು, ಈ ಆರೋಪಗಳೆಲ್ಲಾ ನಿರಾಧಾರ ಎಂದು ತಳ್ಳಿ ಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು 'ನಮ್ಮ ದೇಶ ನೈತಿಕವಾಗಿ ಅಧಃಪತನ ಮತ್ತು ಕೊಳಕಾಗುತ್ತಿರುವುದು ಬಹಳ ದುಃಖಕರವಾಗಿದೆ. ವ್ಯಕ್ತಿತ್ವದ ಹರಣ ಅಮಾನವೀಯತೆ ಹಾಗೂ ಪಾಪದ ಕೆಟ್ಟ ರೂಪವಾಗಿದೆ' ಎಂದಿದ್ದಾರೆ. ಮೇಜರ್ (ನಿವೃತ್ತ) ಆದಿಲ್ ರಾಜಾ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬೆಂಬಲಿಗರಾಗಿದ್ದಾರೆ.