ಮಂಗಳೂರು: ರಜೆಗೆಂದು ಊರಿಗೆ ಬಂದಿದ್ದ ಬಿಎಸ್‌ಎಫ್ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಕುಲಶೇಖರದ ಉಮಿಕಾನ ನಿವಾಸಿ, ಬಿಎಸ್‌ಎಫ್ ಯೋಧ ಹರೀಶ್ ಕುಮಾರ್ (43) ಹೃದಯಾಘಾತವಾಗಿ ಜ.1ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ 21 ವರ್ಷಗಳಿಂದ ಹರೀಶ್ ಕುಮಾರ್ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು 142ನೇ ಬೆಟಾಲಿಯನ್ ಒರಿಸ್ಸಾದಲ್ಲಿ ಕರ್ತವ್ಯದಲ್ಲಿದ್ದರು. ರಜೆಗೆಂದು ಊರಿಗೆ ಬಂದಿದ್ದ ಅವರಿಗೆ ಡಿ. 31ರಂದು ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಜ.1ರಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ, 6 ವರ್ಷದ ಪುತ್ರ ಹಾಗೂ ಒಂದೂವರೆ ವರ್ಷದ ಪುತ್ರಿಯನ್ನು ಅಗಲಿದ್ದಾರೆ.