ಆಳ್ವಾಸ್ ಗೆ ಮಂಗಳೂರು ವಿವಿ ಮಟ್ಟದ ಮಹಿಳಾ ಹ್ಯಾಂಡ್ ಬಾಲ್ ಪ್ರಶಸ್ತಿ

 

 


ನಗರದ ವಿವಿ ಕಾಲೇಜಿನ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಅಂತರ್ಕಾಲೇಜು ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡವು ವಿಜೇತರಾಗಿ ಚಿನ್ನದ ಪದಕ ಪಡೆದುಕೊಂಡಿತು.ಆತಿಥೇಯ ವಿಶ್ವವಿದ್ಯಾನಿಲಯ ಕಾಲೇಜು ತಂಡವು ಪ್ರಪ್ರಥಮ ಬಾರಿಗೆ ಬೆಳ್ಳಿಯ ಪದಕವನ್ನು ಪಡೆದು ಇತಿಹಾಸ ನಿರ್ಮಿಸಿತು




ನಗರದ ವಿವಿ ಕಾಲೇಜಿನ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾಟವನ್ನು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ  ಉದ್ಘಾಟಿಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾವುದೇ ಒಂದು ಸ್ಪರ್ಧೆಯಲ್ಲಿ ಸೋಲು ಕೇವಲ ಸೋಲಲ್ಲ. ಅದು ನಮ್ಮ ಮುಂದಿನ ಜೀವನಕ್ಕೆ ಅನುಭವ. ಆ ಸೋಲು ನಮ್ಮ ಮುಂದಿನ ಗೆಲುವಿಗೆ ಮೆಟ್ಟಿಲಾಗಬಹುದು. ಆದ್ದರಿಂದ ಇಂತಹ ಪಂದ್ಯಾಟಗಳಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಬೇಕು, ಎಂದು ಹೇಳಿದರು.

 ಆಡುವುದು ಅಥವಾ ಪಂದ್ಯಾವಳಿಗಳಲ್ಲಿ ಭಾಗವಹಿಸುವುದು ಕೇವಲ ಪದಕ ಗೆಲ್ಲುವ ಉದ್ದೇಶದಿಂದ ಅಷ್ಟೇ ಅಲ್ಲ, ಅದು ಆರೋಗ್ಯವಂತ ಜೀವನಕ್ಕಾಗಿ, ದೈಹಿಕ ಸದೃಢತೆಗಾಗಿ ಬಹಳ ಮುಖ್ಯ, ಎಂದರು.

 



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ಕ್ರೀಡೆ ಕೇವಲ ಸ್ಪರ್ಧೆ ಮಾತ್ರ ಅಲ್ಲ ಮನರಂಜನೆ ಕೂಡ ಹೌದು. ಭಾಗವಹಿಸಿರುವ ಎಲ್ಲಾ ತಂಡಗಳು ಉತ್ತಮ ಪ್ರದರ್ಶನ ನೀಡುವಂತಾಗಲಿ, ಎಂದು ಶುಭ ಹಾರೈಸಿದರು.

ಪಂದ್ಯಾಟದ ತೀರ್ಪು‍ಗಾರರಾಗಿ ರಾಷ್ಟ್ರೀಯ ಹ್ಯಾಂಡ್ ಬಾಲ್ ತೀರ್ಪು‍ಗಾರ ಮಹಮ್ಮದ್ ತೌಸೀಫ್, ತರಬೇತುದಾರ ಚಂದ್ರಶೇಖರ್, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ದೈಹಿಕ ಶಿಕ್ಷಣ  ನಿರ್ದೇ‍ಶಕ ವಿಶ್ವನಾಥ್ ಹಾಗೂ ಅಶ್ವತ್ ಸಹಕರಿಸಿದರು. ಪಂದ್ಯಾಟದಲ್ಲಿ ಹತ್ತು ತಂಡಗಳು ಭಾಗವಹಿಸಿದ್ದವು. ಸೈಂಟ್ ಅಲೋಷಿಯಸ್ ಕಾಲೇಜಿನ ಡಾ. ಅರುಣ್ ಡಿʼಸೋಜ ಪರಿವೀಕ್ಷಕರಾಗಿದ್ದರು.

ವಿವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕೇಶವ‍ಮೂರ್ತಿ ಸ್ವಾಗತಿಸಿ, ವಿದ್ಯಾರ್ಥಿನಿ   ಕೀರ್ತನಾ ವಂದಿಸಿದರು. ಸ್ನಾತಕೋತ್ತರ  ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಶಮಾ ಕಾರ್ಯಕ್ರಮ ನಿರೂಪಿಸಿದರು.