ಮಂಗಳೂರು: ನಾನು ಪರ್ಸೆಂಟೇಜ್ ತೆಗೊಂಡಿದ್ದರೆ ರಾಜಕೀಯ ನಿವೃತ್ತಿ ಪಡೆದು ಸನ್ಯಾಸಿಯಾಗುವೆ; ಸಿದ್ದರಾಮಯ್ಯ
Monday, January 23, 2023
ಮಂಗಳೂರು: ಮುಖ್ಯಮಂತ್ರಿ ಆಗಿದ್ದಾಗ ನಾನು ಪರ್ಸೆಂಟೇಜ್ ತೆಗೊಂಡಿದ್ದೇನೆಂದು ಯಾರಾದರೂ ಸಾಬೀತು ಮಾಡಿದ್ದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆದು ಸನ್ಯಾಸಿಯಾಗುವೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಓಪನ್ ಚಾಲೆಂಜ್ ಮಾಡಿದ್ದಾರೆ.
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಕಾಂಗ್ರೆಸ್ ನಿಂದ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರದಲ್ಲಿ ವರ್ಗಾವಣೆ ಸೇರಿದಂತೆ ಎಲ್ಲದರಲ್ಲೂ ಲಂಚವೇ ಕಂಡು ಬರುತ್ತಿದೆ. 40% ಕಮಿಷನ್ ವಿಚಾರದಲ್ಲಿ ಗುತ್ತಿಗೆದಾರರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಸಿಎಂ ಕೊಠಡಿಯಲ್ಲೇ ಹೊಟೇಲ್ ತಿಂಡಿ ದರದಂತೆ ಲಂಚದ ಬೋರ್ಡ್ ಹಾಕಿಸಿಕೊಂದ್ದಾರೆ. ರಾಜ್ಯದ ಇತಿಹಾಸದಲ್ಲಿಯೇ ಇಂತಹ ಭ್ರಷ್ಟ ಸರಕಾರ ಯಾವತ್ತೂ ಬಂದಿಲ್ಲ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿಯವರು ತಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳುವುದಾದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ. ಮಾತೆತ್ತಿದರೆ ಧಮ್ ಇದೆಯೇ?, ತಾಕತ್ ಇದೆಯೇ?, ಎಂದು ಕೇಳುವ ಅವರಿಗೆ ಚರ್ಚೆಗೆ ಬರೋಕೆ ಧಮ್, ತಾಕತ್ ಎರಡೂ ಇಲ್ಲ. ಆದರೆ ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸಿದೆ, ನಾವು ಯಾವ ಚೃಚೆಗೂ ಚರ್ಚೆಗೆ ಸಿದ್ಧ ಎಂದರು.
ಬಿಜೆಪಿ ಕರಾವಳಿಯಲ್ಲಿ ದ್ವೇಷದ ರಾಜಕಾರಣವನ್ನು ನಡೆಸುತ್ತಿದೆ. ಹಿಂದುತ್ವ, ಧರ್ಮ, ದೇವರ ಹೆಸರಿನಲ್ಲಿ ಯುವಕರಿಗೆ ಅಫೀಮು ಕುಡಿಸಿ ಮತಾಂಧರನ್ನಾಗಿ ಮಾಡುತ್ತಿದೆ. ಒಂದು ದೇಶ, ಧರ್ಮ, ಒಂದು ಭಾಷೆ ಎನ್ನುವ ಆರ್.ಎಸ್.ಎಸ್ ನ ಮನುವಾದಿ ಸಿದ್ಧಾಂತ ಈ ದೇಶದಲ್ಲಿ ಸಾಧ್ಯವಿಲ್ಲ. ನಮ್ಮದು ಹಲವು ಧರ್ಮ, ಭಾಷೆಗಳನ್ನು ಒಗ್ಗೂಡಿಸಿಕೊಂಡು ಹೋಗುವ ದೇಶ. ನನ್ನನ್ನು ಆರ್.ಎಸ್.ಎಸ್ ನವರು ಹಿಂದೂ ವಿರೋಧಿ ಅಂತ ಬ್ರಾಂಡ್ ಮಾಡ್ತಾರೆ. ಆದರೆ ಮಹಾತ್ಮ ಗಾಂಧಿವರನ್ನು ಕೊಂದ ಗೋಡ್ಸೆ, ಸಾವರ್ಕರ್ ಆರ್.ಎಸ್‌ಎಸ್ ನವರಿಗೆ ಹಿಂದೂಗಳು. ಗಾಂಧಿ, ನೆಹರೂ, ಅಂಬೇಡ್ಕರ್ ಆರ್.ಎಸ್.ಎಸ್ ಗೆ ಹಿಂದೂಗಳಾಗಿ ಕಾಣುತ್ತಿಲ್ಲ. ನೆಹರೂ ಕಟ್ಟಿದ್ದನ್ನು ಮಾರಾಟ ಮಾಡುವ ನರೇಂದ್ರ ಮೋದಿ ಮಾತ್ರ ಹಿಂದೂ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು, ಉಡುಪಿಯನ್ನು ಹಿಂದುತ್ವದ ಲ್ಯಾಬೋರೇಟರಿ ಮಾಡಲಾಗಿದೆ. ಯುವಕರನ್ನ ಜಾತಿ ಧರ್ಮದ ಆಧಾರದಲ್ಲಿ ಎತ್ತಿ ಕಟ್ಟಿ ದಾರಿ ತಪ್ಪಿಸುತ್ತಿದ್ದಾರೆ ಎಂದರು. ಹಿಂದುಳಿದ ವರ್ಗದ ಯುವಕರಿಗೆ ಧರ್ಮದ ಅಫೀಮು ತಿನ್ನಿಸಿ ಗಲಾಟೆಗೆ ಪ್ರಚೋದನೆ ನೀಡುತ್ತಿದಾರೆ. ಇಲ್ಲಿನ ಹತ್ಯೆಗಳ ಹಿಂದೆ ಬಿಜೆಪಿ ಮತ್ತು ಭಜರಂಗದಳದ ಕೈವಾಡವಿದೆ ಎಂದರು.
ಕಾಂಗ್ರೆಸ್ ದೇಶದ ಐಕ್ಯತೆಗಾಗಿ ಪಾದಯಾತ್ರೆ ಮಾಡಿತ್ತು. ಬಿಜೆಪಿ ಯಾವತ್ತಾದಾರೂ ಮಾಡಿದೆಯೇ. ಒಡೆದ ಮನಸ್ಸು ಒಂದುಗೂಡಿಸಲು ಕಾಂಗ್ರೆಸ್ ಸರ್ಕಾರ ಬರಬೇಕು. ಕಾಂಗ್ರೆಸ್ ನ ಬದ್ಧತೆ ಹಾಗೂ ಕಾಳಜಿಯನ್ನು ಮೊದಲು ಕರಾವಳಿಗರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಮೇಲೆ ನಂಬಿಕೆಯಿಟ್ಟು ಮುಂದಿನ ಬಾರಿ ಅಧಿಕಾರ ನೀಡಿದ್ದಲ್ಲಿ ನೂರಕ್ಕೆ ನೂರು ನಾವು ನೀಡಿರುವ ಭರವಸೆಯನ್ನು ಈಡೇರಿಸುತ್ತೇವೆ. ರಾಜ್ಯದ ಜನತೆಯ ವಿಶ್ವಾಸಕ್ಕೆ ದ್ರೋಹ ಮಾಡದೆ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.