ದೆಹಲಿಯ ಸ್ಟಾರ್ ಹೊಟೇಲ್ ಗೆ 23 ಲಕ್ಷ ರೂ. ಬಿಲ್ ಬಾಕಿಯಿರಿಸಿ ಪರಾರಿಯಾಗಿದ್ದ ಖತರ್ನಾಕ್ ಖದೀಮ ಮಂಗಳೂರಿನಲ್ಲಿ ಅರೆಸ್ಟ್
Sunday, January 22, 2023
ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ಸರಕಾರಿ ಅಧಿಕಾರಿಯ ರೀತಿಯಲ್ಲಿ ಸೋಗು ಹಾಕಿ ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ 23 ಲಕ್ಷ ರೂ. ಗೂ ಅಧಿಕ ಮೊತ್ತದ ಬಿಲ್ ಅನ್ನು ಪಾವತಿಸದೆ ಪರಾರಿಯಾಗಿದ್ದ ಖತರ್ನಾಕ್ ಖದೀಮನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಮೂಲದ ಮುಹಮದ್ ಶರೀಫ್ (41) ಬಂಧಿತ ಆರೋಪಿ. ಈತ ನಕಲಿ ವ್ಯಾಪಾರಿ ಕಾರ್ಡ್ ಅನ್ನು ಬಳಸಿ ಕಳೆದ ವರ್ಷ ಸುಮಾರು ಮೂರು ತಿಂಗಳ ಕಾಲ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ತಂಗಿದ್ದ. ಬಳಿಕ ಆತ ಹೊಟೇಲ್‌ನ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ. ಅಲ್ಲದೆ ಬಾಕಿ ಬಿಲ್‌ಗಳನ್ನು ಪಾವತಿಸದೆ ಹೋಟೆಲ್‌ಗೆ 23,46,413 ರೂ. ಮೌಲ್ಯದ ಅಪಾರ ನಷ್ಟ ಉಂಟು ಮಾಡಿದ್ದಾನೆಂದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಲೀಲಾ ಪ್ಯಾಲೇಸ್ ಹೋಟೆಲ್‌ನ ಜಿಎಂ ಅನುಪಮ್ ದಾಸ್ ಗುಪ್ತಾ ನೀಡಿರುವ ದೂರಿನನ್ವಯ ಪೊಲೀಸರು ಜನವರಿ 14 ರಂದು ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಈತನ ಪತ್ತೆಗೆ ಬಲೆ ಬೀಸಿರುವ ದೆಹಲಿ ಪೊಲೀಸರು ಮಹಮ್ಮದ್ ಶರೀಫ್ ನನ್ನು ಜ.19 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಿದ್ದಾರೆಂದು ತಿಳಿದು ಬಂದಿದೆ.