ಮಂಗಳೂರು: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನದಲ್ಲಿ ಗೆಲುವು; ಡಿಕೆಶಿ ಭವಿಷ್ಯ
Monday, January 23, 2023
ಮಂಗಳೂರು: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 135 ರಿಂದ 140 ಸ್ಥಾನ ಪಡೆದು ಗೆಲುವು ಸಾಧಿಸಿ ಅಧಿಕಾರ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು.
ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನುಡಿದಂತೆ ನಡೆಯುವುದು ಕಾಂಗ್ರೆಸ್ ನ ಇತಿಹಾಸ. ನಮಗೆ ಅಧಿಕಾರಕ್ಕೆ ಬರುವುದೆ ಮುಖ್ಯವಲ್ಲ. ರಾಜ್ಯದ ಜನತೆಯ ಸಂತೋಷ ಮುಖ್ಯ. ಆದ್ದರಿಂದ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ರಾಜ್ಯದ ಜನತೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂದು ಹೇಳಿದರು.
ನಾನು ಇಂಧನ ಸಚಿವನಾಗಿದ್ದಾಗ ರಾಜ್ಯದಲ್ಲಿ 10 ಸಾವಿರ ಮೆಗವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ನಾನು ಬಂದ ಬಳಿಕ ಅದನ್ನು 20 ಸಾವಿರ ಮೆಗವ್ಯಾಟ್ ಉತ್ಪಾದನೆಗೆ ಏರಿಸಿದ್ದೇನೆ. 10 ಸಾವಿರ ಮೆಗವ್ಯಾಟ್ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದೇನೆ. ಅದಕ್ಕೆ ಪ್ರಧಾನಮಂತ್ರಿಯವರೇ ಸರ್ಟಿಫಿಕೇಟ್ ನೀಡಿದ್ದಾರೆ. ಇಂದಿನ ಇಂಧನ ಸಚಿವ ಸುನಿಲ್ ಕುಮಾರ್ ಹಿಂದಿನ ದಾಖಲೆ ನೋಡಿ ಮಾತಾಡಲಿ ಎಂದರು.
ಕರಾವಳಿ ಅಭಿವೃದ್ಧಿಗೆ ಅಥಾರಿಟಿ ಮಾಡಿ ಎರಡೂವರೆ ಸಾವಿರ ಕೋಟಿ ಕೊಡ್ತೀವಿ. ಬಿಜೆಪಿಯವರು ಭಾವನೆ ಮೇಲೆ ಯುವಕರನ್ನು ಕೆರಳಿಸ್ತಾರೆ. ಆದರೆ ನಮ್ಮದು ಭಾವನೆ ಇಲ್ಲ, ನಮ್ಮದೇನಿದ್ದರೂ ಬದುಕು. ಪುತ್ತೂರಿನಿಂದ ಬಿಜೆಪಿಯ ಅಶೋಕ್ ರೈ ನಮ್ಮ ಪಕ್ಷಕ್ಕೆ ಬಂದಿದಾರೆ. ಮುಂದೆಯೂ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಗೆ ಬರ್ತಾರೆ ಎಂದು ಹೇಳಿದರು.
ಅರ್ಜಿ ಹಾಕಿದವರೆಲ್ಲರೂ ಶಾಸಕನಾಗಲು ಆಗಲ್ಲ. ಒಬ್ಬರಿಗೆ ಟಿಕೆಟ್ ಕೊಡ್ತೇವೆ. ಟಿಕೆಟ್ ಮುಖ್ಯ ಅಲ್ಲ, ಕಾಂಗ್ರೆಸ್ ಪಕ್ಷ ನಮಗೆ ಮುಖ್ಯ. ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಇರುವವರ ಹೆಸರನ್ನು ಎಲ್ಲರೂ ಉಲ್ಲೇಖಿಸಬಾರದು. ಈ ಬಗ್ಗೆ ನಾಳೆಯೆ ಸರ್ಕ್ಯುಲರ್ ಹೊರಡಿಸ್ತೇನೆ. ಸ್ವಾಗತ ಮಾಡುವವರು ಹೆಸರು ಹೇಳಿದರೆ ಸಾಕು. ವೇದಿಕೆಯಲ್ಲಿ ನೂರು ಜನರು ಇರುತ್ತಾರೆ. ಎಲ್ಲರ ಹೆಸರು ಹೇಳುತ್ತಾ ಹೋದಲ್ಲಿ ಸಮಯ ವ್ಯರ್ಥವಾಗಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಈ ವೇಳೆ ಕೋಡಿಂಬಾಡಿ ಅಶೋಕ್ ರೈ ನೂರಾರು ಕಾರ್ಯಕರ್ತರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಅಲ್ಲದೆ ಸಾಮಾಜಿಕ ಕಾರ್ಯಕರ್ತ ಎಂಜಿ ಹೆಗಡೆ, ಮಾಜಿ ಗ್ರಾಪಂ ಸದಸ್ಯ ಫಕೀರ ಅವರ ಪತ್ನಿ ಧರಣೀ ಫಕೀರ ಕೂಡಾ ಡಿಕೆಶಿಯವರ ಸಮಕ್ಷಮದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.