-->

ಮಂಗಳೂರು: ಮೆಡಿಕಲ್ ಕಾಲೇಜಿನಲ್ಲಿ ಭಾರೀ ಡ್ರಗ್ಸ್ ಜಾಲ; ಇಬ್ಬರು ವೈದ್ಯರು ಸೇರಿದಂತೆ 10 ಮಂದಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಅರೆಸ್ಟ್

ಮಂಗಳೂರು: ಮೆಡಿಕಲ್ ಕಾಲೇಜಿನಲ್ಲಿ ಭಾರೀ ಡ್ರಗ್ಸ್ ಜಾಲ; ಇಬ್ಬರು ವೈದ್ಯರು ಸೇರಿದಂತೆ 10 ಮಂದಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಅರೆಸ್ಟ್



ಮಂಗಳೂರು: ನಗರದಲ್ಲಿ ಭಾರೀ ದೊಡ್ಡ ಮಟ್ಟದ ಡ್ರಗ್ಸ್ ಮಾಫಿಯಾ ಜಾಲವನ್ನು ಮಹತ್ವದ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿರುವ ಪೊಲೀಸರು ಇಬ್ಬರು ವೈದ್ಯರು ಸೇರಿದಂತೆ ಎಂಬಿಬಿಎಸ್, ಬಿಡಿಎಸ್ ಮಾಡುತ್ತಿದ್ದ ಎಂಟು ಮಂದಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಮೂಲತಃ ಇಂಗ್ಲೆಂಡ್ ಪ್ರಜೆ, ಸದ್ಯ ಮಂಗಳೂರಿನ ಪ್ರತಿಷ್ಠಿತ  ದಂತವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಕಿಶೋರಿಲಾಲ್ ರಾಮ್(38), ಕೇರಳ ಮೂಲದ, ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ವೈದ್ಯ ಡಾ.ಸಮೀರ್(32), ಎಂಬಿಬಿಎಸ್ ಇಂಟರ್ನ್ ಮಾಡುತ್ತಿರುವ ಡಾ.ನದಿಯಾ ಸಿರಾಜ್(24), ಆಂಧ್ರಪ್ರದೇಶ ಮೂಲದ ವರ್ಷಿನಿ ಪ್ರತಿ (27), ಸೈಕಿಯಾಟ್ರಿ ಎಂಡಿ ಮಾಡುತ್ತಿರುವ ಪಂಜಾಬ್ ಮೂಲದ ಡಾ.ಭಾನು ಧಹಿಯಾ (27), ಬಿಡಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿನಿ ಚಂಡೀಗಢದ ರಿಯಾ ಚಡ್ಡಾ(27), ಎಂಎಸ್ ಆರ್ಥೋ ಓದುತ್ತಿರುವ ದೆಹಲಿ ಮೂಲದ ಡಾ.ಕ್ಷಿತಿಜ್ ಗುಪ್ತ (25), ನಾಲ್ಕನೇ ವರ್ಷದ ಎಂಬಿಬಿಎಸ್ ಕಲಿಯುತ್ತಿರುವ ಪುಣೆ ಮೂಲದ ಡಾ.ಈರಾ ಬಾಸಿನ್ (23), ಬಿ.ಸಿ.ರೋಡ್ ಮಾರಿಪಳ್ಳ ನಿವಾಸಿ ಮಹಮ್ಮದ್ ರೌಫ್ ಗೌಸ್ (34) ಬಂಧಿತರು.


ಮೂಲತಃ ಇಂಗ್ಲೆಂಡ್ ಪ್ರಜೆಯಾಗಿದ್ದು, ಎನ್‌ಆರ್ ಐ ಕೋಟಾದಲ್ಲಿ ಮಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ದಂತ ವೈದ್ಯಕೀಯ ಓದುತ್ತಿರುವ ನೀಲ್ ಕಿಶೋರಿಲಾಲ್ ರಾಮ್ ಜಿ ಡ್ರಗ್ಸ್ ಜಾಲದ ಕಿಂಗ್ ಪಿನ್ ಆಗಿದ್ದಾನೆ. ಈತನನ್ನು 4 ದಿನಗಳ ಹಿಂದೆ ಬಂಟ್ಸ್ ಹಾಸ್ಟೆಲ್ ಬಳಿಯೊಂದರ ಅಪಾರ್ಟೆಂಟ್ ನಲ್ಲಿ ಬಂಧಿಸಲಾಗಿತ್ತು. ಈತ ನೀಡಿರುವ ಮಾಹಿತಿಯನ್ವಯ ಮಂಗಳವಾರ ಬೆಳಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳೂರಿನ ಎರಡು ಪ್ರತಿಷ್ಠಿತ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮತ್ತು ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.

ಕಿಶೋರಿಲಾಲ್ 15 ವರ್ಷಗಳಿಂದ ಎನ್‌ಆರ್ ಐ ಕೋಟಾದಲ್ಲಿ ದಂತ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾನೆ. ಆದರೆ ಈತ ಪ್ರತಿ ಬಾರಿ ಅನುತ್ತೀರ್ಣನಾಗಿ ಸದ್ಯಕ್ಕೆ ನಾಲ್ಕನೇ ವರ್ಷದಲ್ಲಿದ್ದಾನೆ. ಬಿಡಿಎಸ್ ಕೋರ್ಸ್ ಸಂಪೂರ್ಣ ಮಾಡದ ಈತ ಅಪಾರ್ಟೆಂಟಲ್ಲಿದ್ದು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರಿಗೆ ಗಾಂಜಾ ಇನ್ನಿತರ ಡ್ರಗ್ಸ್ ಪೂರೈಸುತ್ತಿದ್ದ. ಬಂಧಿತರು ಡ್ರಗ್ಸ್ ಪೆಡ್ಲಿಂಗ್ ಹಾಗೂ ಸೇವನೆ ಮಾಡುತ್ತಿರುವುದು ತನಿಖೆಯಿಂದ ಬಯಲಾಗಿದೆ. 

ಬಂಧಿತರು ಹಾಸ್ಟೆಲ್ ನಲ್ಲಿ ಇರದೆ ತಮ್ಮದೇ ರೂಮ್ ಮಾಡಿಕೊಂಡು ವಾಸ್ತವ್ಯ ಹೂಡಿದ್ದರು. ಇವರು ಜೊತೆಯಾಗಿ ಪಾರ್ಟಿ ನಡೆಸುತ್ತಿದ್ದರು. ಅಲ್ಲದೆ ತಾವು ಡ್ರಗ್ಸ್ ಸೇವನೆ ಮಾಡುತ್ತಿದ್ದುದಲ್ಲದೆ, ಕಾಲೇಜಿನ ಇತರ ವಿದ್ಯಾರ್ಥಿಗಳಿಗೂ ಪೂರೈಸುತ್ತಿದ್ದರು. ಇವರಿಗೆ ಮುಂಬೈ, ಆಂಧ್ರಪ್ರದೇಶದಿಂದ ಗಾಂಜಾ, ಎಂಡಿಎಂಎ ಡ್ರಗ್ಸ್ ಪೂರೈಕೆ ಆಗಿತ್ತಿತ್ತು. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ.

Ads on article

Advertise in articles 1

advertising articles 2

Advertise under the article