ಪುತ್ರಿಯ ವಿವಾಹ 1ಕೋಟಿ ರೂ. ವೆಚ್ಚಮಾಡಿ ನೆರವೇರಿಸಿ ಎಂದು ಪತ್ನಿಯನ್ನು ಕೊಂದು ತಾನೂ ಗುಂಡಿಕ್ಕಿ ಆತ್ಮಹತ್ಯೆಗೆ ಶರಣಾದ ಜವಳಿ ಉದ್ಯಮಿ



ಭೋಪಾಲ್: ಪತ್ನಿಯನ್ನು ಹತ್ಯೆಗೈದ ನಗರದ ಪ್ರಮುಖ ಜವಳಿ ಉದ್ಯಮಿಯೊಬ್ಬರು, ದಯವಿಟ್ಟು ತನ್ನ ಹಣ ಮರಳಿಸಿ ಆಕೆಯ ವಿವಾಹವನ್ನು 50 ಲಕ್ಷ ರೂ. ನಿಂದ 1ಕೋಟಿ ರೂ.ವರೆಗೆ ಖರ್ಚು ಮಾಡಿ ನೆರವೇರಿಸಿ ಎಂದು ವೀಡಿಯೋ ಮಾಡಿ ತಾನೂ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಪನ್ನಾ ನಗರದ ಪ್ರಮುಖ ಜವಳಿ ವ್ಯಾಪಾರೋದ್ಯಮಿ ಸಂಜಯ್ ಸೇಠ್, ಪತ್ನಿಯನ್ನು ಹತ್ಯೆ ಮಾಡಿ ತಾನೂ ಗುಂಡಿಕ್ಕಿ ಆತ್ಮಹತ್ಯೆಗೆ ಶರಣಾದವರು. ಆದರೆ ಆತ ಅದಕ್ಕಿಂತ ಮೊದಲು ವೀಡಿಯೋವೊಂದನ್ನು ಮಾಡಿದ್ದು, ಅದರಲ್ಲಿ "ದಯವಿಟ್ಟು ನನ್ನ ಮಕ್ಕಳಿಗಾಗಿ  ಹಾಗೂ ಪುತ್ರಿಯ ಮದುವೆಗಾಗಿ ನನ್ನ ಹಣವನ್ನು ಮರಳಿಸಿ. ಪುತ್ರಿಯ ವಿವಾಹವನ್ನು 50 ಲಕ್ಷದಿಂದ 1 ಕೋಟಿ ರೂ. ವೆಚ್ಚ ಮಾಡಿ ನೆರವೇರಿಸಿ, ನನ್ನ ಪುತ್ರಿಯ ಹೆಸರಿನಲ್ಲಿ ಲಾಕರ್‌ನಲ್ಲಿ 29 ಲಕ್ಷ ರೂ. ಇದೆ. ನಾನು ಹಾಗೂ ನನ್ನ ಪತ್ನಿ ಬದುಕಲು ಸಾಧ್ಯವಿಲ್ಲದೆ ಇರುವುದರಿಂದ ಲೋಕ ತೊರೆಯುತ್ತಿದ್ದೇವೆ. ನನ್ನ ಪುತ್ರಿ ಹಾಗೂ ಮಕ್ಕಳಿಗಾಗಿ ಸಾಕಷ್ಟು ಆಭರಣಗಳಿವೆ. ನನ್ನನ್ನು ಕ್ಷಮಿಸಿ" ಎಂದು ಅಳುತ್ತಾ ವಿಡಿಯೊವೊಂದನ್ನು ಚಿತ್ರೀಕರಿಸಿದ್ದಾರೆ. 

ತನ್ನ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬಗೇಶ್ವ‌ಏರ ಧಾಮ್ ಸ್ವಾಮೀಜಿಗೂ ಆತ ಪತ್ರ ಬರೆದು, "ಗುರೂಜಿ, ನನ್ನನ್ನು ಕ್ಷಮಿಸಿ. ನನಗೆ ಮರು ಜನ್ಮವಿದ್ದಲ್ಲಿ, ನಾನು ನಿಮ್ಮ ನಿಷ್ಠಾವಂತ ಭಕ್ತನಾಗಿಯೇ ಅದನ್ನು ಪಡೆಯುತ್ತೇನೆ” ಎಂದೂ ಪತ್ರ ಬರೆದಿಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪನ್ನಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮರಾಜ್ ಮೀನಾ, ಮೇಲ್ನೋಟಕ್ಕೆ ಈ ಘಟನೆಯು ಕೌಟುಂಬಿಕ ಜಗಳದಿಂದ ನಡೆದಿರುವಂತೆ ಕಾಣುತ್ತಿದೆ. ನಮ್ಮ ತನಿಖೆಯು ಪ್ರಗತಿಯಲ್ಲಿದೆ. ಸದ್ಯಕ್ಕೆ ಈ ಘಟನೆಯಲ್ಲಿ ಹೊರಗಿನವರಾರೂ ಭಾಗಿಯಾಗಿದ್ದಂತೆ ಕಂಡು ಬಂದಿಲ್ಲ. ದಂಪತಿಗಳು ಮಾತ್ರ ಕೋಣೆಯಲ್ಲಿ ಏಕಾಂಗಿಯಾಗಿದ್ದರು. ಈ ಘಟನೆ ಕುರಿತು ನಾವು ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ'' ಎಂದು ತಿಳಿಸಿದ್ದಾರೆ.