ದಾವಣಗೆರೆ: ರಸ್ತೆ ಅಪಘಾತವೊಂದರಲ್ಲಿ ನವವಿವಾಹಿತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಕೋಡದ ಬಳಿ ಭಾನುವಾರ ರಾತ್ರಿ ನಡೆದಿದೆ. ಈ ದುರ್ಘಟನೆ ನಡೆದು ನಾಲೈದು ದಿನಗಳು ಕಳೆದರೂ ಈಗಲೂ ಕುಟುಂಬಸ್ಥರು ಕಂಬನಿ ಮಿಡಿಯುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ನೊವಾಸಿ ಸಂಜಯ್ (28) ಅಪಘಾತದಲ್ಲಿ ಮೃತಪಟ್ಟ ನವವಿವಾಹಿತ. ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸಂಜಯ್, ನವೆಂಬರ್ 28ರಂದು ಬೈಲಹೊಂಗಲ ನಿವಾಸಿ ಸಾಫ್ಟ್ ವೇರ್ ಇಂಜಿನಿಯರ್ ಪ್ರೀತಿ ಎಂಬವರನ್ನು ವಿವಾಹವಾಗಿದ್ದರು. ಆದರೆ, ಮದುವೆಯಾಗಿ ಕೇವಲ 15 ದಿನಕ್ಕೆ ದಂಪತಿಯನ್ನು ವಿಧಿ ದೂರ ಮಾಡಿದೆ.
ಮದುವೆ ಬಳಿಕ ಸಂಜಯ್ ಮತ್ತು ಪ್ರೀತಿ ಡಿ.10ರಂದು ಬೆಳಗ್ಗೆ ಜಿಗಳಿಯಿಂದ ಬೈಕ್‌ನಲ್ಲಿ ದೇವರ ದರ್ಶನಕ್ಕೆ ತೆರಳಿದ್ದಾರೆ. ಸಿಗಂಧೂರು ಕ್ಷೇತ್ರ ದರ್ಶನ ಮಾಡಿ ರಾತ್ರಿ ಮುರುಡೇಶ್ವರದಲ್ಲಿಯೇ ತಂಗಿದ್ದಾರೆ. ನ.11ರಂದು ಬೆಳಗ್ಗೆ ಶಿರಸಿಗೆ ಬಂದು ಮಾರಿಕಾಂಬಾ ದೇವಿ ದರ್ಶನ ಮಾಡಿಕೊಂಡು ವಾಪಸ್ ಜಿಗಳಿಗೆ ಬರುತ್ತಿದ್ದರು. ಈ ವೇಳೆ ಹಂಸಭಾವಿ ಕೋಡ ನಡುವೆ ರಸ್ತೆ ಬದಿ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ದಂಪತಿ ಪ್ರಯಾಣಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ನೆಲಕ್ಕೆ ಬಿದ್ದ ಸಂಜಯ್ ತಲೆಗೆ ತೀವ್ರ ಪೆಟ್ಟಾಗಿದ್ದು, ಎರಡೂ ಕಿವಿಯಲ್ಲಿ ರಕ್ತಸ್ರಾವವಾಗಿ ಗಂಭೀರವಾಗಿ ಗಾಯಗೊಂಡಿದ್ದರು.
ಈ ಅಪಘಾತದಲ್ಲಿ ಪ್ರೀತಿಯವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಂಸಭಾವಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸಂಜಯ್ ಮತ್ತು ಪ್ರೀತಿ ಅವರನ್ನು ರಾಣೇಬೆನ್ನೂರು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಸಂಜಯ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತದೇಹ ತಪಾಸಣೆ ಬಳಿಕ ಸಂಜಯ್ ನೋಡಲು ಪ್ರೀತಿ ಶವಾಗಾರಕ್ಕೆ ಸ್ಟೆಚರ್ ಮೇಲೆಯೇ ಆಗಮಿಸಿದ್ದಾರೆ. ಈ ವೇಳೆ ಪ್ರೀತಿ ತಮ್ಮ ಪತಿಯ ಮುಖವನ್ನು ಸವರಿ ದುಃಖಿಸಿದ ಆ ಕ್ಷಣ ಎಲ್ಲರ ಮನಕಲಕುವಂತಿತ್ತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜಯ್ ಮೃತದೇಹವನ್ನು ಜಿಗಳಿಗೆ ತಂದಾಗ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.
ಸಂಜಯ್ ಮತ್ತು ಪ್ರೀತಿ ಇಬ್ಬರ ಹೊಸ ಬದುಕು ಕಟ್ಟಿಕೊಳ್ಳಲು ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿದ್ದರು. ಡಿ. 12ರಂದು ಈ ದಂಪತಿ ಬೆಂಗಳೂರಿಗೆ ತೆರಳುವ ಕಾರ್ಯಕ್ರಮವನ್ನೂ ನಿಗದಿ ಮಾಡಿಕೊಂಡಿತ್ತು. ಆದರೆ ಅಷ್ಟರಲ್ಲೇ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಪ್ರೀತಿಗೆ ಎರಡೂ ಕೈ, ತಲೆಗೆ ಮತ್ತು ಸೊಂಟಕ್ಕೆ ತೀವ್ರ ಪೆಟ್ಟಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡುವ ಸಾಧ್ಯತೆ ಇದೆ. ಅವರೀಗ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.