ನಿಸ್ವಾರ್ಥ ಸೇವೆಯ ಮೂಲಕ ಇನ್ನೊಬ್ಬರ ಮುಖದಲ್ಲಿ ನಗು ತರಲು ಇರುವ ಅತ್ಯುತ್ತಮ ವೇದಿಕೆ ರಾಷ್ಟ್ರೀಯ ಸೇವಾ ಯೋಜನೆ: ಡಾ ಬಿ ಎ ಕುಮಾರ್ ಹೆಗ್ಡೆ

 



ಮೂಡುಬಿದಿರೆ: ಸಮಾಜದ ವಾಸ್ತವಿಕತೆ ಬಗೆಗೆ ಪ್ರಾಯೋಗಿಕ ಅರಿವು ಅಗತ್ಯ ,ಇದು   ವ್ಯಕ್ತಿಗೆ ಸೇವಾ ಮನೋಭಾವ  ರೂಢಿಸಿಕೊಳ್ಳಲು ಸಹಕರಿಸುತ್ತದೆ ಎಂದು ಉಜಿರೆ ಎಸ್‌ಡಿಎಂ  ಕಾಲೇಜಿನ ವಿಜ್ಞಾನ ವಿಭಾಗದ ಡೀನ್ ಡಾ ಬಿ.ಎ ಕುಮಾರ್ ಹೆಗ್ಡೆ ಹೇಳಿದರು.

ಆಳ್ವಾಸ್ ಕಾಲೇಜಿನ 2022-23 ಶೈಕ್ಷಣಿಕ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ಓರಿಯಂಟೇಷನ್  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.



ನಿಸ್ವಾರ್ಥ ಸೇವೆಯ ಮೂಲಕ ಇನ್ನೊಬ್ಬರ ಮುಖದಲ್ಲಿ ನಗು ತರಲು ಇರುವ ಅತ್ಯುತ್ತಮ ವೇದಿಕೆ  ರಾಷ್ಟಿçÃಯ ಸೇವಾ ಯೋಜನೆ. ವಿದ್ಯೆ ಕೇವಲ ನಾಲ್ಕು ಗೋಡೆಗೆ  ಮಾತ್ರ ಸೀಮಿತವಾಗಿರದೇ ಜ್ಞಾನ, ಕೌಶಲ್ಯ ,ಮನೋಧರ್ಮ ಸಂಪಾದನೆ ಆಶಯ ಹೊಂದಿರಬೇಕು. ಕೆಲವು ಗ್ರಾಮಗಳಲ್ಲಿ ಶೇಕಡಾ 60% ಶೋಷಿತ ವರ್ಗ, ಅನಕ್ಷರಸ್ಥ ಹಾಗೂ ಬಡ ಜನರಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಅವರನ್ನು ಮುಖ್ಯ ವಾಹಿನಿಗೆ ತರುವ ಜವಾಬ್ದಾರಿ ವಿದ್ಯಾವಂತರ ಮೇಲಿದೆ ಎಂದರು

ಆಧುನಿಕತೆ ನೆಪದಲ್ಲಿ ಮನುಷ್ಯ ಮಾನವೀಯ ಮೌಲ್ಯ ಮರೆಯುತ್ತಿದ್ದಾನೆ. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸಹಾಯ ಪ್ರವೃತ್ತಿಯನ್ನು ಬೆಳೆಸುವುದರ ಜತೆಗೆ ಸರಳತೆ ,ನಾಯಕತ್ವಗುಣ, ಜೀವನ ಮೌಲ್ಯವನ್ನು ತಿಳಿಸಿಕೊಡುತ್ತದೆ. ಆ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರನ್ನು ಹುಟ್ಟುಹಾಕುತ್ತದೆ ಎಂದರು

ಯಾವುದೇ ಫಲಾಪೇಕ್ಷೆಯನ್ನು ಬಯಸದೆ ಮಾಡುವ ಚಟುವಟಿಕೆ ಸೇವೆ ಎನಿಸಿಕೊಳ್ಳುತ್ತದೆ.  ಪ್ರಾರಂಭದಿಂದಲೂ ಇಲ್ಲಿಯವರೆಗೂ ರಾಷ್ಟ್ರೀಯ ಸೇವಾ ಯೋಜನೆ  ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂದು ದೇಶಾದ್ಯಂತ 36.5 ಲಕ್ಷಕ್ಕೂ ಅಧಿಕ ಸೇವಾನಿರತರನ್ನು ಹೊಂದಿದ್ದು ಪ್ರತಿಯೊಬ್ಬರೂ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡು, ಜವಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವುದು  ಇತರರಿಗೆ ಮಾದರಿಯಾಗಿದೆ ಎಂದರು.



ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ಅಧ್ಯಕ್ಷತೆ ವಹಿಸಿದ್ದರು.  ಆಳ್ವಾಸ್ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕರಾದ ವಸಂತ್, ಡಾ.ವಿನೋದ ಕುಮಾರ್, ಡಾ.ರಮಾನಂದ್ ಭಟ್, ಅಕ್ಷತಾ ಪ್ರಭು ಹಾಗೂ ಆಳ್ವಾಸ್ ಎನ್‌ಸಿಸಿ ಘಟಕದ ವಿದ್ಯಾರ್ಥಿ ಸಂಯೋಜಕರಾದ ಸಾಧ್ವಿತಾ, ತೃಪ್ತಿ  ಶೆಟ್ಟಿ, ಸಾತ್ವಿಕ್ ಜೈನ್ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಗಗನಾ ಲೋಕೇಶ್ ಹಾಗೂ ಬಿ.ಆದಿತ್ಯ ನಾಯಕ್ ನಿರೂಪಿಸಿ, ಅವಿನಾಶ್ ಶೆಟ್ಟಿ ಸ್ವಾಗತಿಸಿ, ದಿಶಾ ಶೆಟ್ಟಿಗಾರ್ ವಂದಿಸಿದರು.