ರಾಮನಗರ: ಪಾನಮತ್ತ ವ್ಯಕ್ತಿಯೋರ್ವನು ನಾಲ್ಕನೆಯ ಪತ್ನಿಯನ್ನು ಅಮಾನುಷವಾಗಿ ಕಟ್ಟಿಗೆಯಿಂದ ಬಡಿದು ಕೊಂದು ಹಾಕಿರುವ ಘಟನೆ ರಾಮನಗರ ಜಿಲ್ಲೆಯ ಅವರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಿತ್ರವೆಂದರೆ ಈತ ತನ್ನ ಎರಡನೇ ಪತ್ನಿಯನ್ನೂ ಇದೇ ರೀತಿ ಕೊಲೆಗೈದಿದ್ದಾನೆ. 
ಬೋರಯ್ಯ ಬಂಧಿತ ಆರೋಪಿ. ಈತನ ಪತ್ನಿ ಭದ್ರಮ್ಮ ಕೊಲೆಯಾದ ಮಹಿಳೆ. ಪತಿ - ಪತ್ನಿಯಿಬ್ಬರೂ ಮಾವಿನತೋಟದಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಪಾನಮತ್ತರಾಗಿ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಪತಿ ಕಟ್ಟಿಗೆಯಿಂದ ಆಕೆಗೆ ಹೊಡೆದಿದ್ದು, ಅವಳು ಸಾವಿಗೀಡಾಗಿದ್ದಾಳೆ.
ಬೋರಯ್ಯನಿಗೆ ಭದ್ರಮ್ಮ ನಾಲ್ಕನೆಯ ಹೆಂಡತಿಯಾಗಿದ್ದು ಈತ ಎರಡನೆಯ ಪತ್ನಿಯನ್ನು 2014ರಲ್ಲಿ ಕನಕಪುರದಲ್ಲಿ ಇದೇ ರೀತಿ ಕಟ್ಟಿಗೆಯಿಂದ ಬಡಿದು ಕೊಲೆ ಮಾಡಿದ್ದ. ಬಳಿಕ ಜಾಮೀನಿನ ಮೇಲೆ ಹೊರಬಂದು ಭದ್ರಮ್ಮಳನ್ನು ಮದುವೆಯಾಗಿದ್ದನು. ಪತ್ನಿಯನ್ನು ಹತ್ಯೆ ಮಾಡಿದ ಆರೋಪ ಮೇರೆಗೆ ಬೋರಯ್ಯನನ್ನು ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಡಿಸಿದ್ದಾರೆ.
 
   
 
 
 
 
 
 
 
 
 
 
 
 
 
 
 
 
 
