ಬೆಂಗಳೂರು: ಮಾವ ಮಾಡಿರುವ ಸಾಲಕ್ಕೆ ದುಷ್ಕರ್ಮಿಗಳು ಅಳಿಯನನ್ನು ಅಪಹರಣ ಮಾಡಿರುವ ಘಟನೆ ನಗರದ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿ ಸ್ವರೂಪ್ ಶೆಟ್ಟಿ ಮತ್ತು ತಂಡವು ರಾಜಶೇಖರ ಎಂಬವರನ್ನು ಅಪಹರಿಸಿ ಕೊಟ್ಟ ಸಾಲ ಹಿಂದಿರುಗಿಸುವಂತೆ ಬೆದರಿಕೆ ಒಡ್ಡಿತ್ತು. ರಾಜಶೇಖರ್ ಅವರ ಮಾವ ಲಕ್ಷ್ಮಣ್ ರೆಡ್ಡಿಯು ಸ್ವರೂಪ್ ಶೆಟ್ಟಿಯಿಂದ 5 ಲಕ್ಷ ರೂ. ಹಣ ಸಾಲ ಪಡೆದಿದ್ದರು. ಆದರೆ ಆತ 2 ಲಕ್ಷ ರೂ. ವಾಪಸ್ ಕೊಟ್ಟು ಉಳಿದ ಮೂರು ಲಕ್ಷ ರೂ. ಕೊಡದೆ ಸತಾಯಿಸುತ್ತಿದ್ದ. ಹೀಗಾಗಿ ಲಕ್ಷ್ಮಣ್ ರೆಡ್ಡಿ ಅಳಿಯ ರಾಜಶೇಖರ್‌ನನ್ನು ಸ್ವರೂಪ್ ಆ್ಯಂಡ್ ಗ್ಯಾಂಗ್ ಅಪಹರಿಸಿತ್ತು.
ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯ ಗಾರೆಬಾವಿಪಾಳ್ಯ ಬಳಿಯಿಂದ ರಾಜಶೇಖರ್ ನನ್ನ ಅಪಹರಣ ಮಾಡಲಾಗಿತ್ತು. ಆ ಬಳಿಕ ರಾಜಶೇಖರ್ ಫೋನ್ ನಿಂದಲೇ ಲಕ್ಷ್ಮಣ್ ರೆಡ್ಡಿಗೆ ಕರೆ ಮಾಡಿ, ಆತನಿಂದಲೇ ಅಣ್ಣ ರಾಮಚಂದ್ರರಿಗೆ ಕಾಲ್ ಮಾಡಿಸಿ, ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು.
ಕರೆ ಮಾಡಿ ಮೊದಲಿಗೆ 50 ಸಾವಿರ ರೂ. ಹಣವನ್ನು ಅಕೌಂಟ್‌ಗೆ ಹಾಕಿಸಿಕೊಂಡಿದ್ದ ಆರೋಪಿಗಳು, ಮತ್ತೆ 2.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಎರಡನೇ ಬಾರಿ ಆರೋಪಿಗಳೇ ಮಾತನಾಡಿ ಹಣದ ಬೇಡಿಕೆ ಇಟ್ಟಿದ್ದರು. ನಿಮ್ಮ ಅಳಿಯನನ್ನು ಕಿಡ್ರಾಪ್ ಮಾಡಿದ್ದೇವೆ, 2.5 ಲಕ್ಷ ರೂ. ಹಣ ತಂದು ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದರು. ಅಲ್ಲದೆ, ರಾಜಶೇಖರ ಮೇಲೆ ಹಲ್ಲೆ ಸಹ ಮಾಡಿದ್ದರು.
ತಕ್ಷಣ ಮನೆಯವರು ಸ್ವರೂಪ್ ಶೆಟ್ಟಿ ಮತ್ತು ತಂಡದ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬೊಮ್ಮನಹಳ್ಳಿ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.