ಮಹಿಳಾ ರೋಗಿಗಳಿಗೆ ಅರಿಯದಂತೆ ಅರೆನಗ್ನ ವೀಡಿಯೋ ಸರೆ ಹಿಡಿಯುತ್ತಿದ್ದ ಕಾಮುಕ ನಕಲಿ ವೈದ್ಯ ಸಿಸಿಬಿ ಬಲೆಗೆ

ಬೆಂಗಳೂರು: ಆಕ್ಯೂಪಂಕ್ಚರ್‌ ಚಿಕಿತ್ಸೆಯೆಂದು ಮಹಿಳೆಯರ ವಸ್ತ್ರ ತೆಗೆಸಿ ಅಂಗಾಂಗಗಳನ್ನು ಮುಟ್ಟಿ ವಿಕೃತ ಮೆರೆದು, ಅವರ ಅರೆನಗ್ನ ದೃಶ್ಯಗಳನ್ನು ವೀಡಿಯೋ ಮಾಡಿತ್ತಿದ್ದ ನಕಲಿ ವೈದ್ಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮತ್ತಿಕೆರೆ ನಿವಾಸಿ ವೆಂಕಟರಮಣ್‌ (57) ಬಂಧಿತ ಆರೋಪಿ. ಈತ ಮತ್ತಿಕೆರೆಯ ತನ್ನ ನಿವಾಸದ ಬಳಿಯೇ ಆಕ್ಯೂಪಂಕ್ಚರ್‌ ಕ್ಲಿನಿಕ್‌ ನಡೆಸುತ್ತಿದ್ದ. ತನ್ನ ಕ್ಲಿನಿಕ್‌ಗೆ ಬರುವ ಯುವತಿಯರು ಹಾಗೂ ಮಹಿಳೆಯರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವರ ಬಟ್ಟೆಯನ್ನು ಬಿಚ್ಚಿಸಿ, ಅಂಗಾಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ. ಅಲ್ಲದೆ, ರೋಗಿಗಳಿಗೆ ತಿಳಿಯದಂತೆ ಮೊಬೈಲ್‌ನಲ್ಲಿ ಅದನ್ನು ಚಿತ್ರೀಕರಣ ಮಾಡುತ್ತಿದ್ದ. ಇತ್ತೀಚೆಗೆ ಯುವತಿಯೊಬ್ಬಳು ಚಿಕಿತ್ಸೆಗೆ ಹೋಗಿದ್ದಾಳೆ. ಆಗ ಆತ ತನ್ನ ವಿಕೃತಿ ಮೆರೆದಿದ್ದ. ಅದನ್ನು ಯುವತಿ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಈತನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಲ್ಲದೆ ಈತ ಕ್ಲಿನಿಕ್‌ಗೆ ಬಂದಿದ್ದ ಅಪ್ರಾಪ್ತೆಯನ್ನೂ ಅರೆನಗ್ನಗೊಳಿಸಿ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದ. ಅದನ್ನು ಗಮನಿಸಿದ ಸಂತ್ರಸ್ತೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ನೊಂದ ಪೋಷಕರು ಬಸವನ ಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದರು. ಇದೇ ರೀತಿ ಹಲವಾರು ಮಂದಿಗೆ ಈತ ಈ ರೀತಿಯ ವಿಕೃತಿ ಮೆರೆದಿದ್ದಾನೆ. ಓರ್ವ ಮಹಿಳೆ ಆತನ ಮೊಬೈಲ್‌ ಕಸಿದುಕೊಂಡು ನೋಡಿದಾಗ ಹತ್ತಾರು ವಿಡಿಯೋಗಳು ಬೆಳಕಿಗೆ ಬಂದಿವೆ. ಬಳಿಕ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಪ್ರಕರಣವನ್ನು ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಆರೋಪಿಯನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ. ಈತನ ವಿರುದ್ಧ ಯಶವಂತಪುರ, ಬಸವನಗುಡಿ ಮತ್ತು ಸಿಇಎನ್‌ ಠಾಣೆಯಲ್ಲಿ ಆರೋಪಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಪೊಕ್ಸೊ ಪ್ರಕರಣ ಕೂಡ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.

ಆಂಧ್ರಪ್ರದೇಶ ಗುತ್ತಿತಾಡಪತ್ರಿ ಮೂಲದ ವೆಂಕಟರಮಣ್‌ ಅಲಿಯಾಸ್‌ ವೆಂಕಟ್‌, ಜಾಲಹಳ್ಳಿಯ ಬಿಇಎಲ್‌ ಶಾಲೆ ಮತ್ತು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ನಂತರ ಮಾರತ್‌ಹಳ್ಳಿಯ ಪಿಟಿಲೆಟ್‌ ಇಂಡಸ್ಟ್ರೀಟ್‌ ಕಂಪನಿಯಲ್ಲಿ 10 ವರ್ಷ ಕಾಲ ಕಮರ್ಷಿಯಲ್‌ ಮ್ಯಾನೇಜರ್‌ ಆಗಿದ್ದನು.‌ ಈ ಮಧ್ಯೆ ಆಕ್ಯೂಪಂಕ್ಚರ್ ತರಬೇತಿ ಪಡೆದು ಮನೆಯ ಬಳಿ 2018ರಲ್ಲಿ ಮನೆಯ ಸಮೀಪದಲ್ಲಿ ಆಕ್ಯೂಪಂಕ್ಚರ್‌ ಕ್ಲಿನಿಕ್‌ ತೆರೆದು ಚಿಕಿತ್ಸೆ ನೀಡಲು ಆರಂಭಿಸಿದ್ದಾನೆ ಎಂದು ಪೊಲೀಸರು ಹೇಳಿದರು.

ಆರೋಪಿಯ ಮೊಬೈಲ್‌ ಅನ್ನು ಜಪ್ತಿ ಮಾಡಿದ ಪೊಲೀಸರಿಗೆ ಶಾಕ್‌ ಕಾದಿತ್ತು. ಏಕೆಂದರೆ ಆರೋಪಿ ಮೊಬೈಲ್‌ನಲ್ಲಿ ಮಾತ್ರವಲ್ಲದೆ, ಒಂದು ಟಿಬಿ ಹಾರ್ಡ್‌ಡಿಸ್ಕ್ ತುಂಬುವಷ್ಟು ವೀಡಿಯೋಗಳನ್ನು ಇಟ್ಟುಕೊಂಡಿದ್ದಾನೆ ಎಂದು ಹೇಳಲಾಗಿದೆ. ಸುಮಾರು 3-4 ವರ್ಷಗಳಿಂದ ಆರೋಪಿ ಕೃತ್ಯ ಎಸಗುತ್ತಿರುವುದರಿಂದ ಆರೋಪಿ ಎಲ್ಲ ವಿಡಿಯೋಗಳನ್ನು ಶೇಖರಿಸಿ ಕೊಂಡಿದ್ದಾನೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯ ಪತ್ನಿ, ಮಗಳು ಈತನನ್ನು ಬಿಟ್ಟು ಬೇರೆಡೆ ವಾಸವಾಗಿದ್ದಾರೆ. ಹೀಗಾಗಿ ತನ್ನ ವೈಯಕ್ತಿಕ ಬಾಧೆಗಳ ಈಡೇರಿಕೆಗೆ ಈ ರೀತಿ ಮಾಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಈತನಿಂದ ವಂಚನೆಗೊಳಗಾದ ಸಂತ್ರಸ್ತರು ದೂರು ನೀಡಬಹುದು ಎಂದು ಪೊಲೀಸರು ಮಾಹಿತಿ ನೀಡಿದರು.