ಮುಸುಕುಧಾರಿ ದರೋಡೆಕೋರರಿಂದ ಬಂದೂಕು ತೋರಿಸಿ ಬ್ಯಾಂಕ್ ನಿಂದ 5 ಕೋಟಿ ರೂ. ದರೋಡೆ

ಭೋಪಾಲ್: ಬಿಹಾರದ ಗ್ಯಾಂಗೊಂದರ ಆರು ಸದಸ್ಯರು ಮಧ್ಯಪ್ರದೇಶದ ಕಟ್ಟಿ ಜಿಲ್ಲೆಯಲ್ಲಿ ಚಿನ್ನದ ಮೇಲೆ ಸಾಲ ನೀಡುವ ಬ್ಯಾಂಕ್‌ ನಿಂದ 5 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ 3.5 ಲಕ್ಷ ರೂ. ನಗದನ್ನು ದರೋಡೆ ಮಾಡಿರುವ ಘಟನೆ ನಡೆದಿದೆ.

ಈ ಘಟನೆ ಶನಿವಾರ ನಡೆದಿದ್ದು, ಆರು ಮಂದಿ ಮುಸುಕುಧಾರಿ ದರೋಡೆಕೋರರು ಶಸ್ತ್ರಸಜ್ಜಿತರಾಗಿ ಬೈಕ್‌ಗಳಲ್ಲಿ ಬಂದಿದ್ದಾರೆ. ಬಳಿಕ ಬಂದೂಕು ತೋರಿಸಿ ಬ್ಯಾಂಕ್‌ನಿಂದ ಬೆಲೆಬಾಳುವ ವಸ್ತುಗಳು ಹಾಗೂ ನಗದು ದೋಚಿದ್ದಾರೆ ಎಂದು ಕಟ್ಟಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಎಸ್.ಕೆ. ಜೈನ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಬಾರ್ಗವಾನ್ ಪ್ರದೇಶದಲ್ಲಿರುವ ಈ ಬ್ಯಾಂಕ್‌ಗೆ ಸರಿಯಾದ ಭದ್ರತಾ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ದರೋಡೆಕಾರರು ಈ ಕೃತ್ಯ ಎಸಗಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಪ್ರಕಾರ ದರೋಡೆಕೋರರು 4 ಕೋಟಿಯಿಂದ 5 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ 3.5 ಲಕ್ಷ ರೂ. ನಗದು ತೆಗೆದುಕೊಂಡು ಹೋಗಿದ್ದಾರೆ ಎಂದು ಜೈನ್ ಹೇಳಿದ್ದಾರೆ.