ಬೆಂಕಿ ಅವಘಡಕ್ಕೆ ಇಬ್ಬರು ಮೃತ್ಯು: ಮೂರು ಅಂಗಡಿಗಳು ಸಂಪೂರ್ಣ ಭಸ್ಮ

ವಿಜಯವಾಡ: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಪಟಾಕಿ ಅಂಗಡಿಯೊಂದು ವಿಜಯವಾಡದ ಗಾಂಧಿನಗರದ ಜಿಮ್ಹಾನ ಮೈದಾನದಲ್ಲಿ ಸಂಭವಿಸಿದೆ.

ಈ ಪ್ರದೇಶದಲ್ಲಿ ಒಟ್ಟು 19 ಅಂಗಡಿಗಳಿದ್ದು, ಅವುಗಳಲ್ಲಿ 3 ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅ.23ರಂದು ಮಾರಾಟಕ್ಕೆಂದು ಅಂಗಡಿಗೆ ವ್ಯಾನ್ ಮೂಲಕ ಪಟಾಕಿ ಬಂದಿದೆ. ಪಟಾಕಿಯನ್ನು ಇಳಿಸುವ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಡ ಮೂಲದ ಕಾಸಿ ಮತ್ತು ಪಿಡುಗುರಳ್ಳ ಪಟ್ಟಣದ ಸಾಂಬಾ ಮೃತಪಟ್ಟವರು.

ಪಟಾಕಿ ಅಂಗಡಿ ಹೊತ್ತಿ ಉರಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌. ಬೆಂಕಿಯ ಕೆನ್ನಾಲಿಗೆ ತೀವ್ರತೆಗೊಂಡು ಮೂರು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಧಿಕ ಪ್ರಮಾಣದ ಪಟಾಕಿಗಳು ಸಿಡಿಯುತ್ತಿರುವ ಶಬ್ದ ಕೇಳಿಸುತ್ತಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಪರಿಣಾಮ ಇನ್ನಷ್ಟು ಅಂಗಡಿಗಳಿಗೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕುವುದು ತಪ್ಪಿದಂತಾಗಿದೆ.