ಬೆಂಗಳೂರು: 11 ಲಕ್ಷ ರೂ. ಕಾರು ರಿಪೇರಿಗೆ 22 ಲಕ್ಷ ರೂ.; ದಂಗಾದ ಕಾರು ಮಾಲಕ

ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಎಲ್ಲೆಡೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಪರಿಣಾಮ ಬಹುರಾಷ್ಟ್ರೀಯ ಕಂಪೆನಿಯ ಉದ್ಯೋಗಿಯೋರ್ವರ 11 ಲಕ್ಷ ರೂ. ಬೆಲೆಯ ಕಾರು ಹಾನಿಗೊಳಗಾಗಿತ್ತು. ಅವರ ಈ ಕಾರು ರಿಪೇರಿಗೆ ಬರೋಬ್ಬರಿ 22 ಲಕ್ಷ ರೂ.ವನ್ನು ಸರ್ವೀಸ್ ಸೆಂಟರ್‌ನವರು ಕೇಳಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಹೌದು , ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರೋ ಪ್ರಾಡಕ್ಟ್ ಮ್ಯಾನೇಜರ್ ಅನಿರುದ್ಧ ಗಣೇಶ್ ತಮಗೆ ಈ ರೀತಿಯ ಅನುಭವವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡವರು. 11 ಲಕ್ಷ ರೂ.ನ ಅವರ ವೋಕ್ಸ್‌ವ್ಯಾಗನ್ ಪೋಲೋ ಕಾರಿನ ರಿಪೇರಿಗೆ ಶೋ ರೂಮ್‌ನವರು ಬರೋಬ್ಬರಿ 22 ಲಕ್ಷ ರೂ. ಎಸ್ಟಿಮೇಷನ್ ನೀಡಿದ್ದಾರೆ. ಇದನ್ನು ನೋಡಿದ ಅವರು ಕ್ಷಣ ಕಾಲ ದಂಗಾಗಿದ್ದಾರೆ.

ಅನಿರುದ್ಧ್ ಗಣೇಶ್ ಕಾರು ಇತ್ತೀಚೆಗೆ ನಗರದಲ್ಲಿ ಸುರಿದ ಭಾರೀ ಮಳೆಯಿಂದ ನೀರಿನಲ್ಲಿ ಮುಳುಗಿ ಹೋಗಿತ್ತು. ಪರಿಣಾಮ ಕಾರನ್ನು ರಿಪೇರಿ ಮಾಡಲು ವೈಟ್‌ಫೀಲ್ಡ್‌ನ ಆ್ಯಪಿಲ್ ಆಟೋ ವರ್ಕ್ ( ವೋಕ್ಸ್‌ವ್ಯಾಗನ್ ಡೀಲರ್‌ಶಿಪ್ ) ಗೆ ರಿಪೇರಿಗೆ ನೀಡಿದ್ದರು. ಕಾರಿನ ಸ್ಥಿತಿ ಕಂಡ ವರ್ಕ್ ಶಾಪ್ ಸಿಬ್ಬಂದಿ ಪರಿಶೀಲನೆ ನಡೆಸಿ 22 ಲಕ್ಷ ರೂ. ಅಂದಾಜು ಬಿಲ್ ನೀಡಿದ್ದಾರೆ‌. ಅಲ್ಲದೇ ಕಾರಿಗೆ ಇನ್ಸೂರೆನ್ಸ್ ಇದೇ ಎಂದು ಹೇಳಿದರೆ, ಅದಕ್ಕೆ ಸಂಬಂಧಿಸಿದ ಪತ್ರಗಳಿಗೆ 44,840 ರೂ. ಕೇಳಿದ್ದರಂತೆ. 

ಇದರಿಂದ ಅಸಮಾಧಾನಗೊಂಡ ಅನಿರುದ್ಧ್ ಗಣೇಶ್  ನೇರ ಕಂಪನಿಗೆ ಇ - ಮೇಲ್ ಮೂಲಕ ದೂರು ನೀಡಿದ್ದಾರೆ. ಕೊನೆಗೆ ಸಮಸ್ಯೆ ಬಗೆಹರಿಸಿದ ವರ್ಕ್ ಸೆಂಟರ್ ನವರು, ಕಂಪೆನಿಯ ಆದೇಶದ ಮೇರೆಗೆ ಕೇವಲ 5 ಸಾವಿರ ರೂ.ನಲ್ಲಿ ಕಾರನ್ನು ಸರಿಪಡಿಸಿದ್ದಾರಂತೆ.