
ನಟಿ ಅನನ್ಯಾ ಪಾಂಡೆ ಪ್ಲ್ಯಾನ್ ಅನ್ನೇ ಉಲ್ಟಾ ಮಾಡಿದ ಲೈಗರ್ ಸಿನಿಮಾ ಹೀನಾಯ ಸೋಲು..!
Saturday, September 24, 2022
ಹೈದರಾಬಾದ್ : ಲೈಗರ್ ಸಿನಿಮಾ ಮಕಾಡೆ ಮಲಗಿರುವ ಪರಿಣಾಮವು ಇಡೀ ಚಿತ್ರತಂಡದ ಮೇಲೆ ಕರಿಮೋಡದಂತೆ ಆವರಿಸಿದೆ. ಸಿನಿಮಾ ನಿರ್ದೇಶಕ ಪುರಿ ಜಗನ್ನಾಥ್ ಈ ಸೋಲಿನಿಂದ ಮುಂಬೈಯನ್ನೇ ತೊರೆದಿದ್ದಾರೆ. ನಟ ವಿಜಯ್ ದೇವರಕೊಂಡಗೆ ಮುಂದಿನ ಸಿನಿಮಾಗಳದ್ದೇ ಚಿಂತೆಯಾಗಿದೆ. ಈ ಸಿನಿಮಾ ಗೆದ್ದಿದ್ದರೆ ಈಗಾಗಲೇ ಇದೇ ಚಿತ್ರತಂಡದಿಂದ 'ಜನ ಗಣ ಮನ' ಸಿನಿಮಾ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ, ಲೈಗರ್ ಸೋಲು ಅದಕ್ಕೆ ಬ್ರೇಕ್ ಹಾಕಿದೆ.
ಇದೀಗ ಲೈಗರ್ ಸಿನಿಮಾ ಸೋಲಿನ ಪರಿಣಾಮ ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ ಮೇಲೂ ಬೀರಿದೆ ಎನ್ನಲಾಗುತ್ತಿದೆ. ಲೈಗರ್ ಬಿಡುಗಡೆಗೂ ಮುನ್ನವೇ ಎನ್ ಟಿಆರ್ -30 ಚಿತ್ರ ಸೇರಿದಂತೆ ಅನೇಕ ತೆಲುಗು ಸಿನಿಮಾಗಳ ಆಫರ್ ಅವರನ್ನು ಹುಡುಕಿ ಬಂದಿದ್ದವು. ಆದರೆ, ಅವರು ಯಾವ ಸಿನಿಮಾಕ್ಕೂ ಸಹಿ ಹಾಕದೆ ಲೈಗರ್ ಸಿನಿಮಾದ ಫಲಿತಾಂಶವನ್ನು ಎದುರು ನೋಡುತ್ತಿದ್ದರು. ಲೈಗರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದಲ್ಲಿ 4 ಕೋಟಿ ರೂ. ಸಂಭಾವನೆ ಪಡೆಯುವ ಪ್ಲ್ಯಾನ್ ಹಾಕಿಕೊಂಡಿದ್ದರು. ಆದರೆ, ಲೈಗರ್ ಹೀನಾಯ ಸೋಲು ಅನನ್ಯಾ ಪ್ಲಾನ್‌ಗಳನ್ನೇ ಬುಡಮೇಲು ಮಾಡಿದೆ.
ಇದೀಗ 1.5 ರಿಂದ 2 ಕೋಟಿ ರೂ. ಕೊಟ್ಟರು ಓಕೆ ಎಂದು ಅನನ್ಯಾ ಹೇಳುತ್ತಿದ್ದಾರಂತೆ. ಆದರೆ , ತೆಲುಗು ಇಂಡಸ್ಟ್ರಿ ಇದೀಗ ಉಲ್ಟಾ ಹೊಡೆದಿದ್ದು, ಅನನ್ಯಾರಿಂದ ಅಂತರ ಕಾಯ್ದುಕೊಳ್ಳುತ್ತಿದೆ. ಅದಕ್ಕೆ ಕಾರಣವೂ ಇದೆ. ತೆಲುಗು ಇಂಡಸ್ಟ್ರಿಯಲ್ಲಿ ಸಾಮಾನ್ಯವಾಗಿ ಯಶಸ್ಸಿನ ಆಧಾರದ ಮೇಲೆ ನಟ, ನಟಿಯರನ್ನು ಆಯ್ಕೆ ಮಾಡುತ್ತಾರೆ. ಇದೀಗ ಲೈಗರ್ ಸೋಲಿನಿಂದಾಗಿ ಅನನ್ಯಾ ಪಾಂಡೆಗೆ ಮೊದಲೇ ಆಫರ್ ಮಾಡಿದ್ದ ಸಿನಿಮಾಗಳೆಲ್ಲ ಬೇರೆಯವರ ಪಾಲಾಗಲಿವೆ. ಎನ್‌ಟಿಆರ್ - 30 ಸಿನಿಮಾಗೆ ಕೈರಾ ಅಡ್ವಾಣಿ ಮತ್ತು ರಶ್ಮಿಕಾ ಮಂದಣ್ಣಾಗೆ ಆಫರ್ ಮಾಡಲಾಗಿದೆಯಂತೆ. ಕೃತಿ ಸನೋನ್ ಹೆಸರು ಸಹ ಪಟ್ಟಿಯಲ್ಲಿದೆ. ಇದರಿಂದ ಅಸಮಾಧಾನಗೊಂಡಿರುವ ಅನನ್ಯಾ ಈಗ ಬಾಲಿವುಡ್‌ನತ್ತ ಮಾತ್ರ ಗಮನ ಹರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಪ್ರಭಾಸ್ ನಟನೆಯ ಸಾಹೋ ಬಿಡುಗಡೆ ಸಮಯದಲ್ಲೂ ಇದೇ ರೀತಿ ಆಗಿತ್ತು. ಆಗ ಶ್ರದ್ಧಾ ಕಪೂರ್‌ಗೆ ಅನೇಕ ತೆಲುಗು ಸಿನಿಮಾಗಳ ಆಫರ್ ಬಂದಿತ್ತು. ಆದರೆ ಯಾವಾಗ ಸಾಹೋ ಹೀನಾಯ ಸೋಲು ಕಂಡಿತ್ತೋ, ಆ ಬಳಿಕ ಶ್ರದ್ಧಾ ತೆಲುಗು ಚಿತ್ರರಂಗದಿಂದಲೇ ದೂರವಾದರು.