-->
ಸುರತ್ಕಲ್: ಬಂದೋಬಸ್ತಿಗೆ ಆಗಮಿಸಿದ ಪೊಲೀಸರಿಂದ ಹಳಸಿದ ಅನ್ನದ ವಿಚಾರದಲ್ಲಿ ರಂಪಾಟ; ವೀಡಿಯೋ ವೈರಲ್

ಸುರತ್ಕಲ್: ಬಂದೋಬಸ್ತಿಗೆ ಆಗಮಿಸಿದ ಪೊಲೀಸರಿಂದ ಹಳಸಿದ ಅನ್ನದ ವಿಚಾರದಲ್ಲಿ ರಂಪಾಟ; ವೀಡಿಯೋ ವೈರಲ್

ಸುರತ್ಕಲ್: ಮಂಗಳೂರು ನಗರದ ಸುರತ್ಕಲ್ ನಲ್ಲಿ ಇತ್ತೀಚೆಗೆ ನಡೆದಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಬಂದೋಬಸ್ತ್ ಗಾಗಿ ಆಗಮಿಸಿರುವ ಚಿಕ್ಕಮಗಳೂರು ಪೊಲೀಸರು ಹಳಸಿದ ಅನ್ನ ನೀಡಿರುವ ವಿಚಾರದಲ್ಲಿ ರಂಪಾಟ ಮಾಡಿರುವ ವೀಡಿಯೋವೊಂದು ವೈರಲ್ ಆಗಿದೆ. ಭದ್ರತೆಗಾಗಿ ಬಂದಿರುವ ಪೊಲೀಸರೇ ಸಣ್ಣ ವಿಚಾರಕ್ಕಾಗಿ ರಂಪಾಟ ಮಾಡಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಗುರಿಯಾಗಿದೆ.
ಫಾಝಿಲ್ ಹತ್ಯೆಯ ಬಳಿಕ ಸುರತ್ಕಲ್ ನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಂದ ಹಾಗೂ ಕೆಎಸ್‌ಆರ್‌ಪಿ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹಾಗೂ ಬಂದೋಬಸ್ತು ವ್ಯವಸ್ಥೆಗಾಗಿ ಆಗಮಿಸಿದ್ದಾರೆ. ಇವರಲ್ಲಿ ಚಿಕ್ಕಮಗಳೂರು ಪೊಲೀಸ್ ಪಡೆಗೆ ಸುರತ್ಕಲ್ ಭವನದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು‌. 

ಎರಡು ದಿನಗಳ ಹಿಂದೆ ಈ ರಂಪಾಟ ನಡೆದಿದೆ ಎನ್ನಲಾಗಿದೆ. ಅಂದು ಇಲ್ಲಿದ್ದ ಚಿಕ್ಕಮಗಳೂರು ಪೊಲೀಸ್ ಪಡೆಗೆ ಸುರತ್ಕಲ್ ಠಾಣಾ ಸಿಬ್ಬಂದಿ ಅನ್ನ ಕೊಂಡೊಯ್ದಿದ್ದಾರೆ. ಆಗ ಅವರು 'ತಮಗೆ ಹಳಸಿದ ಅನ್ನಾಹಾರ ಬೇಡ ಎಂದು ನಿರಾಕರಿಸಿದ್ದಾರೆ. ಈ ಸಂದರ್ಭ ಚಿಕ್ಕಮಗಳೂರು ಹಾಗೂ ಸುರತ್ಕಲ್ ಠಾಣಾ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಇವರ ಈ ರಂಪಾಟವನ್ನು ಪೊಲೀಸ್ ಸಿಬ್ಬಂದಿಯೊಬ್ಬರೇ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ . ಈ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದೆ. ಇದಾದ ಸ್ವಲ್ಪ ಹೊತ್ತಿನ ಬಳಿಕ ಬೇರೆ ಊಟದ ವ್ಯವಸ್ಥೆ ಮಾಡಲಾಯಿತೆಂದು ತಿಳಿದುಬಂದಿದೆ.

ಎಲ್ಲರಿಗೂ ಒಂದೇ ಕಡೆಯಿಂದ ಉತ್ತಮ ಊಟದ ವ್ಯವಸ್ಥೆಯನ್ನೇ ಮಾಡಲಾಗಿದೆ. ಆದರೆ ಯಾಕಾಗಿ ಹಳಸಿದ ಅನ್ನವೆಂದು ನಿರಾಕರಿಸಲಾಗಿದೆ ಎಂದು ಗೊತ್ತಿಲ್ಲ. ಎಲ್ಲಾ ಪೊಲೀಸ್ ಅಧಿಕಾರಿಗಳು, ಕೆಎಸ್ ಆರ್‌ಪಿ ಸಿಬ್ಬಂದಿ ಅದೇ ಊಟವನ್ನೇ ಮಾಡಿದ್ದಾರೆ. ಚಿಕ್ಕಮಗಳೂರು ಪೊಲೀಸ್ ಸಿಬ್ಬಂದಿ ಮಾಡಿರುವ ಆರೋಪದ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಉನ್ನತ ಮಟ್ಟದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article