ಸೆಲ್ಫಿ ಹುಚ್ಚಿಗೆ ಬಲಿಯಾಯ್ತು ಒಂದೇ ಕುಟುಂಬದ ಆರು ಮಂದಿಯ ಜೀವ

ರಾಕ್ಷುರ: ಸೆಲ್ಫಿ ಹುಚ್ಚು ಅದೆಷ್ಟು ಮಂದಿಯ ಜೀವವನ್ನು ಬಲಿ ಪಡೆದಿದೆ. ಆದರೂ ಕೆಲವರಿಗೆ ಇನ್ನೂ ಬುದ್ಧಿ ಬಂದಂತಿಲ್ಲ. ಅಂಥದ್ದೇ ಸೆಲ್ಫಿ ಹುಚ್ಚಿಗೆ ಇದೀಗ ಒಂದೇ ಕುಟುಂಬದ ಆರು ಮಂದಿಯ ಪ್ರಾಣವನ್ನೇ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ರಾಮದಾಹ ಜಲಪಾತದಲ್ಲಿ ನಡೆದಿದೆ. 

ಸೆಲ್ಫಿ ತೆಗೆಯಲು ಹೋಗಿರುವ ಇಬ್ಬರನ್ನು ಉಳಿಸಲು ಹೋಗಿ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕುಟುಂಬದ ಮಹಿಳೆಯರಿಬ್ಬರು ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದಾಗ ಈ ಘಟನೆ ಸಂಭವಿಸಿದೆ. ನೀರು ಹರಿವು ಹೆಚ್ಚಾಗಿ ಮಹಿಳೆಯರಿಬ್ಬರು ಆಯತಪ್ಪಿ ಬಿದ್ದು ಕೊಚ್ಚಿ ಹೋಗಿದ್ದಾರೆ. ಅವರನ್ನು ರಕ್ಷಿಸಲು ಕುಟುಂಬದ ಇನ್ನು ನಾಲ್ವರು ನೀರಿಗೆ ಹಾರಿದ್ದಾರೆ. ಆಗ ನೀರಿನ ವೇಗ ಇನ್ನೂ ಹೆಚ್ಚಾಗಿ ಎಲ್ಲರೂ ಕೂಡ ನೀರಿನಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಬಳಿಕ ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗುತ್ತದೆ. ಈ ಜಲಪಾತಕ್ಕೆ ಇಳಿಯದಂತೆ ಸ್ಥಳದಲ್ಲಿ ಎಚ್ಚರಿಕೆ ಫಲಕವನ್ನು ಹಾಕಿದ್ದರೂ, ಪ್ರವಾಸಿಗರು ಆಳವಾದ ನೀರಿನಲ್ಲಿ ಇಳಿದು ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.