-->

ಮಂಗಳೂರು: ಕೊಲೆಗಡುಕ ಪ್ರವೀಣ್ ಬಿಡುಗಡೆ ಬೇಡ; ಕುಟುಂಬಸ್ಥರಿಂದ ಪೊಲೀಸ್ ಕಮಿಷನರ್ ಗೆ ಮನವಿ

ಮಂಗಳೂರು: ಕೊಲೆಗಡುಕ ಪ್ರವೀಣ್ ಬಿಡುಗಡೆ ಬೇಡ; ಕುಟುಂಬಸ್ಥರಿಂದ ಪೊಲೀಸ್ ಕಮಿಷನರ್ ಗೆ ಮನವಿ

ಮಂಗಳೂರು: ತನ್ನದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದು ಜೀವಾವಧಿ ಶಿಕ್ಷೆಗೊಳಗಾಗಿರುವ ಪ್ರವೀಣ್ ಕುಮಾರ್ ನನ್ನು ಇದೀಗ ಸನ್ನಡತೆಯ ಆಧಾರದಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ನರ ಹಂತಕ ಪ್ರವೀಣ್ ನನ್ನು ಬಿಡುಗಡೆ ಮಾಡದಿರಿ ಎಂದು ಸ್ವತಃ ಪ್ರವೀಣ್ ಕುಮಾರ್ ಪತ್ನಿ ಹಾಗೂ ಕುಟುಂಬಸ್ಥರೇ ಇಂದು ಮಂಗಳೂರು ಪೊಲೀಸ್ ಕಮಿಷನರ್ ರಲ್ಲಿ ಮನವಿ ಮಾಡಿದ್ದಾರೆ.

1994ರ ಫೆಬ್ರವರಿ 23ರಂದು ನಗರದ ವಾಮಂಜೂರಿನ ಅಪ್ಪಿ ಶೇರಿಗಾರ್ತಿ, ಅವರ ಪುತ್ರಿ ಶಕುಂತಳಾ, ಪುತ್ರ ಗೋವಿಂದ ಹಾಗೂ ಶಕುಂತಳಾ ಪುತ್ರಿ ದೀಪಿಕಾ ಎಂಬ 9 ವರ್ಷದ ಬಾಲಕಿಯನ್ನು ಪ್ರವೀಣ್ ಕುಮಾರ್ ಬರ್ಬರವಾಗಿ ಹತ್ಯೆ ಮಾಡಿದ್ದ. ಇವರೆಲ್ಲಾ ಪ್ರವೀಣ್ ಕುಮಾರ್ ಸೋದರ ಸಂಬಂಧಿಗಳಾಗಿದ್ದರು. ಇದೀಗ ಈ ಕೊಲೆಪಾತಕಿಯನ್ನು ಸ್ವಾತಂತ್ರ್ಯದ ಅಮೃತೋತ್ಸವದ ಈ ಸಂದರ್ಭದಲ್ಲಿ ಸನ್ನಡತೆಯ ಆಧಾರದಲ್ಲಿ ಸರಕಾರ ಬಿಡುಗಡೆ ಭಾಗ್ಯ ಕರುಣಿಸಿತ್ತು. ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಲಾಗುತ್ತಿರುವ ವಿಚಾರ ಆತನ ಕುಟುಂಬ ವಲಯದಲ್ಲಿ ಭಾರೀ ಮೂಡಿಸಿದೆ‌. ಆದ್ದರಿಂದ ಹತ್ಯೆಯಾದವರ ಕುಟುಂಬದ ಸುಮಾರು 50ರಷ್ಟು ಮಂದಿ ಇಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್‌. ಅವರಿಗೆ ಆತನ ಬಿಡುಗಡೆ ಮಾಡಬಾರದೆಂದು ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ‌. 


ಸ್ವತಃ ಕೊಲೆಪಾತಕಿ ಪ್ರವೀಣ್ ಕುಮಾರ್ ಪತ್ನಿ ಅನಸೂಯಾ ಅವರೂ ಆತನ ಬಿಡುಗಡೆ ಮಾಡಬಾರದೆಂದು ಕಮಿಷನರ್ ಅವರಿಗೆ ಮನವಿ ಮಾಡಿದ್ದಾರೆ. ಹಂತಕ ಪ್ರವೀಣ್ ಕುಮಾರ್ ಮಾಡಿರುವ ಕೃತ್ಯದಿಂದ ಆತನ ಪೂರ್ತಿ ಕುಟುಂಬವೇ ಆತನ ವಿರುದ್ಧ ತಿರುಗಿ ಬಿದ್ದಿದೆ. ಈ ಘಟನೆ ಅಂದು ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಇದೀಗ ಹಂತಕ ಪ್ರವೀಣ್ ಕುಮಾರ್ ಬಿಡುಗಡೆ ಮಾಡಬೇಡಿ ಎಂದು ಸ್ವತಃ ಆತನ ಕುಟುಂಬಸ್ಥರೇ ಮನವಿ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದೆ. 

ಕುಟುಂಬಸ್ಥರ ಮನವಿ ಸ್ವೀಕರಿಸಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಪ್ರತಿಕ್ರಿಯೆ ನೀಡಿ,‌ ನಮಗೆ ಸರಕಾರದಿಂದ ಅಥವಾ ಮೇಲಾಧಿಕಾರಿಗಳಿಂದ ಪ್ರವೀಣ್ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಆತ ಜೈಲಿನಲ್ಲಿಯೇ ಕುಟುಂಬಸ್ಥರಿಗೆ ಕೊಲೆ ಬೆದರಿಕೆ ಒಡ್ಡಿದ್ದಾನೆಂದು ಆರೋಪ ಕೇಳಿ ಬರುತ್ತಿದೆ. ಅಲ್ಲದೆ ಆತನ ಇಡೀ ಕುಟುಂಬವೇ ಪ್ರವೀಣ್ ಬಿಡುಗಡೆಯನ್ನು ವಿರೋಧಿಸಿ ಮನವಿ ಮಾಡಿದೆ. ಈ ಮನವಿಯನ್ನು ಇಂದೇ ನಾನು ಮೇಲಾಧಿಕಾರಿಗಳಿಗೆ ಕಳುಹಿಸುತ್ತೇನೆ ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article