
ಸಂಚಾರದಲ್ಲಿದ್ದ ಕಾರು ಮೇಲೆ ಉರುಳಿ ಬಿದ್ದ ಮರ: ತಂದೆ - ಮಗ ಸ್ಥಳದಲ್ಲಿಯೇ ದಾರುಣ ಸಾವು
8/05/2022 08:23:00 PM
ಚಾಮರಾಜನಗರ: ಚಲಿಸುತ್ತಿದ್ದ ಕಾರಿನ ಮೇಲೆಯೇ ಮರವೊಂದು ಉರುಳಿ ಬಿದ್ದ ಪರಿಣಾಮ ತಂದೆ - ಮಗ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆಯೊಂದು ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿ ಕ್ರಾಸ್ ಬಳಿ ಸಂಭವಿಸಿದೆ.
ಹೊನ್ನೂರು ಗ್ರಾಮ ನಿವಾಸಿ ಎಚ್.ಬಿ.ರಾಜು(49), ಮತ್ತು ಅವರ ಪುತ್ರ ಶರತ್(22) ಮೃತಪಟ್ಟ ದುರ್ದೈವಿಗಳು.
ಯಳಂದೂರಿನಲ್ಲಿ ಹೋಲ್ ಸೆಲ್ ವ್ಯಾಪಾರಿಯಾಗಿದ್ದ ರಾಜು ಅವರು ತಮ್ಮ ಪುತ್ರನೊಂದಿಗೆ ಕಾರಿನಲ್ಲಿ ಕುದೇರು ಮಾರ್ಗವಾಗಿ ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಇವರು ಸಂಚರಿಸುತ್ತಿದ್ದ ಕಾರಿನ ಮೇಲೆಯೇ ಏಕಾಏಕಿ ಆಲದ ಮರವೊಂದು ಉರುಳಿ ಬಿದ್ದಿದೆ. ಪರಿಣಾಮ ಕಾರು ನಜ್ಜುಗುಜ್ಜಾಗಿ ಒಳಗಿದ್ದ ತಂದೆ ಮಗ ಇಬ್ಬರೂ ಮೃತಪಟ್ಟಿದ್ದಾರೆ. ಈ ಬಗ್ಗೆ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.